ಕಾರವಾರ : ಕನ್ನಡ, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ವಿಜಯಲಕ್ಷ್ಮಿ ಸಂಕಷ್ಟದಲ್ಲಿ ಇದ್ದ ಸುದ್ದಿ ವರದಿಯಾಗಿತ್ತು. ನಟಿ ವಿಜಯಲಕ್ಷ್ಮಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದು ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ವಿಜಯಲಕ್ಷ್ಮಿ ‘’ನಾನು ಬದುಕುತ್ತೀನಾ ಅಂತಲೇ ನನಗೆ ನಂಬಿಕೆ ಇಲ್ಲ. ನನ್ನ ಆರೋಗ್ಯ ತುಂಬಾ ಕೆಟ್ಟಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ’’ ಅಂತ ಅಭಿಮಾನಿಗಳಲ್ಲಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದರು.
ಇದನ್ನು ಗಮನಿಸಿದ್ದ ಉತ್ತರ ಕನ್ನಡ ಜಿಲ್ಲೆಯ ದೀಪಾ ತುಕಾರಾಮ ನಾಯ್ಕ ರವರು ಅವರ ಫೇಸ್ ಬುಕ್ ಮೂಲಕ ಸಂಪರ್ಕ ಮಾಡಿ ಅವರ ಆಸ್ಪತ್ರೆ ಬಿಲ್ ಮೊತ್ತ ₹30,000 ವನ್ನು ಬರಿಸಿದ್ದರು.
ನಂತರ ತನ್ನ ನಲ್ಮೆಯ ನಟಿಯ ಜೀವನಕ್ಕೆ ನೆರವಾಗುವ ನಿಟ್ಟಿನಲ್ಲಿ ದೀಪಾ ನಂತರ ಹೊನ್ನಾವರದ ಕರ್ಕಿಯಲ್ಲಿದ್ದ ತಂದೆ ತುಕಾರಾಮ್ ರವರಿಗೆ ಕರೆ ಮಾಡಿ ನಡೆದ ಘಟನಾವಳಿಗಳನ್ನು ವಿವರಿಸಿದ್ದಾರೆ ಎನ್ನಲಾಗಿದೆ. ನಂತರ ಮನೆಯ ವ್ಯವಸ್ಥೆ ಮಾಡಲು ತಿಳಿಸಿದ್ದರು.
ಇದರಂತೆ ತುಕಾರಾಮ್ ರವರು ಕರ್ಕಿಯಲ್ಲಿ ತಮ್ಮದೇ ವೆಚ್ಚದಲ್ಲಿ ನಾಲ್ಕು ಸಾವಿರ ರೂಪಾಯಿಗೆ ಬಾಡಿಗೆ ಮನೆ ಮಾಡಿ ಅವರ ಕುಟುಂಬವನ್ನು ತಮ್ಮದೇ ವೆಚ್ಚದಲ್ಲಿ ಕರ್ಕಿಗೆ ಕರೆಸಿ ಆರು ದಿನಗಳ ಕಾಲ ಸಲಹಿದ್ದಾರೆ. ಆದರೇ ಮನೆಯಲ್ಲಿ ಪಲ್ಲಿ, ಜಿರಲೆ ಬರುತ್ತದೆ ,ಮನೆ ಸರಿಯಿಲ್ಲ ಎಂದು ಹೇಳಿಕೊಂಡ ವಿಜಯಲಕ್ಷ್ಮಿ ತಾಯಿ ಮತ್ತು ಅಕ್ಕ ನನ್ನು ಕರೆದುಕೊಂಡು ಇಂದು ಬೆಂಗಳೂರಿಗೆ ತೆರಳಿದರು ಎಂದು ವರದಿಯಾಗಿದೆ.
ಹೊನ್ನಾವರದ ಕರ್ಕಿ ಯಲ್ಲಿ ಮಾಡಿದ ವ್ಯವಸ್ಥೆ ಬಗ್ಗೆ ಆಶ್ರಯ ನೀಡಿರುವ ಕುರಿತು ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದ ವಿಜಯಲಕ್ಷ್ಮಿ ,ಮನೆ ಸರಿ ಇಲ್ಲ ಎಂದು ಸಹ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕರ್ಕಿಯಲ್ಲಿ ಇದ್ದಷ್ಟು ದಿನ ಓಡಾಟ ಮಾಡಲಾಗದ ಸ್ಥಿತಿಯಲ್ಲಿರುವ ವಿಜಯಲಕ್ಷ್ಮಿ ಅವರ ಅಕ್ಕ, ತಾಯಿಯ ಶೌಚಾ, ಸ್ವಚ್ಛ ಮಾಡುವುದು,ಊಟ ಮಾಡಿಸುವುದು ಸಹ ತುಕಾರಾಮ್ ರವರ ಮನೆಯವರು ಹಾಗೂ ಅವರ ಮನೆಯ ಕೆಲಸದವರು ಮಾಡಿದ್ದಾರೆ ಎನ್ನಲಾಗಿದೆ. ತುಕಾರಾಮ್ ರವರು ವಿಜಯಲಕ್ಷ್ಮಿ ಪರಿಸ್ಥಿತಿ ನೋಡಿ , ತಾಯಿ ಮತ್ತು ಅಕ್ಕಳನ್ನು ಇಲ್ಲಿಯೇ ಬಿಡಿ ,ಇಲ್ಲಿ ಆಶ್ರಮ ಇದೆ ಇಲ್ಲಿ ನಾನು ಇರುತ್ತೇನೆ ನೋಡಿಕೊಳ್ಳುತ್ತೇನೆ. ನೀವು ಬೆಂಗಳೂರಿಗೆ ಹೋಗಿ ಸಿನಮಾ ದಲ್ಲಿ ಅವಕಾಶ ಪಡೆದು ನಿಮ್ಮ ವೃತ್ತಿ ಮುಂದುವರೆಸುವಂತೆ ಹೇಳಿದ್ದಾರೆ. ಆದರೇ ಇದಕ್ಕೆ ಒಪ್ಪದ ಅವರು ನನ್ನ ತಾಯಿ ,ಅಕ್ಕ ನನ್ನೊಂದಿಗೆ ಇರುತ್ತಾರೆ. ಅವರನ್ನು ಬಿಟ್ಟು ಇರುವುದಿಲ್ಲ ಎಂದಿದ್ದರೆಂದು ತುಕಾರಾಂ ಮಾಹಿತಿ ನೀಡಿದ್ದಾರೆ. ತಾನೇ ಕಾರು ವ್ಯವಸ್ಥೆ ಮಾಡಿ ಬೆಂಗಳೂರಿಗೆ ಕಳಿಸಿರುವುದಾಗಿ ತಿಳಿಸಿದ್ದಾರೆ. ಎಲ್ಲಾ ವ್ಯವಸ್ಥೆ ಮಾಡಿದವರಿಗೆ ಹೀಗೆ ಮಾಡೋದಾ ಅಂತ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.