ಭಟ್ಕಳ: ಸಾಧಿಸುವ ಛಲ ಇದ್ದರೆ ಏನನ್ನಾದರೂ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಸಾಕ್ಷ್ಯ ಇಲ್ಲದೆ. ಸರಕಾರ ನಡೆಸಿದ ಪರೀಕ್ಷಾ ಮೌಲ್ಯಮಾಪನ ಕ್ರಮವನ್ನು ಅಲ್ಲಗಳೆದು ಸಾಧನೆ ಮಾಡಿ ತೋರಿದ ಸಾಧಕಿಯ ಸುದ್ದಿ ಇದು.
ಕೋವಿಡ್-19 ರಿಂದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯನ್ನು ರದ್ದುಗೊಳಿಸಿ ಎಸ್.ಎಸ್.ಎಲ್.ಸಿ. ಮತ್ತು ಪ್ರಥಮ ಪಿ.ಯು.ಸಿಯ ಅಂಕಗಳ ಆಧಾರದ ಮೇಲೆ ನೀಡಿದ್ದ ದ್ವಿತೀಯ ಪಿ.ಯು. ಅಂಕಗಳನ್ನು ತಿರಸ್ಕರಿಸಿ ಪುನಃ ವಾರ್ಷಿಕ ಪರೀಕ್ಷೆ ಬರೆದ ಭಟ್ಕಳದ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಮಂಗಳಗೌರಿ ಭಟ್ 42 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ಹಾಡುವಳ್ಳಿಯ ವಿಷ್ಣು ಭಟ್ ಮತ್ತು ಗೋಪಿಕಾ ಭಟ್ ದಂಪತಿಗಳ ಮಗಳಾದ ಮಂಗಳಗೌರಿ ಅಂಕಗಳನ್ನು ತಿರಸ್ಕರಿಸಿ ಪರೀಕ್ಷೆ ಬರೆದ ಏಕೈಕ ವಿದ್ಯಾರ್ಥಿನಿಯಾಗಿದ್ದು, 539 ಅಂಕಗಳ ಬದಲಾಗಿ 581 ಅಂಕಗಳನ್ನು ಪಡೆದು ಒಟ್ಟಾರೆ 42 ಹೆಚ್ಚುವರಿ ಅಂಕಗಳೊಂದಿಗೆ ಮಹಾವಿದ್ಯಾಲಯಕ್ಕೆ ಮೊದಲ ಸ್ಥಾನಕ್ಕೆ ಬಡ್ತಿ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾಳೆ.