ಭಟ್ಕಳ: ಜೆಸಿಬಿ ವಾಹನ ಡಿಕ್ಕಿಯಾಗಿ ಮಹಿಳೆಯೋರ್ವಳ ಎರಡೂ ಕಾಲಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಶಿರಾಲಿಯಲ್ಲಿ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಶಿರಾಲಿಯ ಅಳ್ವೆಕೋಡಿ ಮುಂಗ್ರಿಮನೆ ನಿವಾಸಿ ಸುಜಾತಾ ಶ್ರೀಧರ ಮೊಗೇರ (38) ಎಂದು ಗುರುತಿಸಲಾಗಿದೆ.

ಈಕೆ ರಾತ್ರಿ 9.15ರ ಸುಮಾರಿಗೆ ಮೀನು ಮಾರಾಟ ಮಾಡಿ ಮನೆಗೆ ಹೋಗಲು ರಸ್ತೆ ದಾಟಲು ಶಿರಾಲಿಯ ಚಿತ್ತಾಪುರ ರಸ್ತೆಯ ದ್ವಾರದ ಬಳಿ ನಿಂತಿದ್ದ ಸಂದರ್ಭದಲ್ಲಿ ಭಟ್ಕಳದಿಂದ ಶಿರಾಲಿ ಕಡೆಗೆ ಬರುತ್ತಿದ್ದ ಜೆಸಿಬಿ ವಾಹನವೊಂದರ ಚಾಲಕ ಜೆ.ಸಿ.ಬಿ.ಯನ್ನು ತಿರುಗಿಸುವ ಸಮಯದಲ್ಲಿ ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು ಅದೇ ವೇಗದಲ್ಲಿ ಜೆ.ಸಿ.ಬಿ. ತಿರುಗಿ ಈಕೆಗೆ ಗುದ್ದಿದ ಪರಿಣಾಮ ಈಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.

RELATED ARTICLES  ಅಶಕ್ತರ ಸಹಾಯಾರ್ಥ ಚಿಣ್ಣರ ಯಕ್ಷಗಾನ : ಕುಮಟಾದಲ್ಲಿ ಕಾರ್ಯಕ್ರಮ

ಎರಡೂ ಕಾಲುಗಳಿಗೆ ಗಂಭೀರ ಪೆಟ್ಟು ತಗುಲಿದ್ದ ಈಕೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಗಾಯಗೊಂಡ ಮಹಿಳೆಯ ಸಹೋದರ ಭಾಸ್ಕರ ವೆಂಕಟ್ರಮಣ ಮೊಗೇರ ಅಪಘಾತಕ್ಕೆ ಕಾರಣನಾದ ಜೆಸಿಬಿ ಚಾಲಕ ಗುಜರಾತಿನ ರಾಜೇಶ ಬಾಯ್ ವಿರುದ್ಧ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶಿರಾಲಿಯ ಚಿತ್ರಾಪುರ ರಸ್ತೆಯ ತಿರುವಿನಲ್ಲಿ ಸದಾ ಜನಜಂಗುಳಿ ಇರುತ್ತಿದ್ದು ಇಲ್ಲಿ ರಸ್ತೆ ಪಕ್ಕದಲ್ಲಿಯೇ ವಿವಿಧ ವಸ್ತುಗಳನ್ನು, ಮೀನು ಇತ್ಯಾದಿಗಳನ್ನಿಟ್ಟು ವ್ಯಾಪಾರ ಮಾಡುವುದು, ವಾಹನಗಳನ್ನು ತಿರುವಿನಲ್ಲಿಯೇ ಪಾರ್ಕ್ ಮಾಡುವುದು ಮಾಡುವುದರಿಂದ ಸದಾ ಇಲ್ಲಿ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಲೇ ಇರುತ್ತವೆ. ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ನಿರ್ಮಾಣ ಮಾಡಿದ್ದರೂ ಸಹ ರಸ್ತೆ ಪಕ್ಕದಲ್ಲಿ ಇಕ್ಕಟ್ಟಿನ ಪ್ರದೇಶದಲ್ಲಿಯೇ ನಿಂತು, ಕುಳಿತು ಮೀನು ಮಾರುವುದು ಸಾಮಾನ್ಯವಾಗಿದೆ. ಚಿತ್ರಾಪುರ ಕ್ರಾಸ್ ನಲ್ಲಿ ಅಪಘಾತಗಳು ಸಂಭವಿಸುತ್ತಲೇ ಇದ್ದರೂ ಪೊಲೀಸ್ ಇಲಾಖೆ ಸಹ ಗಂಭೀರವಾಗಿ ಕ್ರಮ ಕೈಗೊಳ್ಳದೇ ಇರುವುದು ಕೂಡಾ ಇನ್ನಷ್ಟು ಅಪಘಾತವಾಗುವುದಕ್ಕೆ ಕಾರಣವಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ.

RELATED ARTICLES  ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ