ಇಂದು ಮಕ್ಕಳ ಕಥಾ ಸಂಕಲನ ಬಿಡುಗಡೆ
ಯಲ್ಲಾಪುರ: ತಾಲೂಕಿನ ತೇಲಂಗಾರಿನ ಮೈತ್ರಿ ಬಳಗ ಮತ್ತು ವಜ್ರಳ್ಳಿಯ ಸ್ವಾಮಿ ವಿವೇಕಾನಂದ ಸೇವಾ ಬಳಗ ಇವುಗಳ ಸಂಯುಕ್ತಾಶ್ರಯದಲ್ಲಿ ಸೆ.26 ರಂದು ಮಧ್ಯಾಹ್ನ 4 ಗಂಟೆಗೆ ಸಾಹಿತಿ ವನರಾಗ ಶರ್ಮಾ ಅವರ ಮಕ್ಕಳ ಕಥಾ ಸಂಕಲನ ‘ಮಾಳಿಗೆಯ ಮನೆ ಮತ್ತು ಮೈದಾನ’ ಕೃತಿ ಲೋಕಾರ್ಪಣೆಗೊಳ್ಳಲಿದೆ. ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಕೃತಿ ಬಿಡುಗಡೆ ಮಾಡಲಿದ್ದು, ಯಕ್ಷಗಾನ ಕಲಾವಿದ ನಾರಾಯಣ ಗಾಂವಾರ ಗೋಡೆಪಾಲ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕಾ ಘಟಕದ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ತಿ, ಪ್ರಮುಖರಾದ ಪರಮೇಶ್ವರ ಭಟ್ಟ, ಸುಮಾ ಕಂಚಿಪಾಲ ಆಗಮಿಸುವರು. ನಂತರ ವನರಾಗ ಶರ್ಮರ ಮಧುರ ರಾಮಾಯಣದಿಂದ ಆಯ್ದ ಷಟ್ಟದಿಗಳನ್ನು ಭಾಗವತ ಶಶಾಂಕ ಬೋಡೆಮನೆ ವಾಚಿಸಲಿದ್ದು, ಉಪನ್ಯಾಸಕ ಡಾ.ಡಿ.ಕೆ.ಗಾಂವಾರ ವ್ಯಾಖ್ಯಾನ ನೀಡುವರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದು ಸಂಗೀತ-ಸಂಗತ
ಸಿದ್ದಾಪುರ: ತಾಲೂಕಿನ ಭುವನಗಿರಿಯ ಸುಷರ ಸಂಗೀತ ಪರಿವಾರದ ಸಂಘಟನೆಯಲ್ಲಿ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದಲ್ಲಿ ಆಲಾಪಗಳ ಅಡಿಪಾಯದ ಮೇಲೆ ಸದ್ವಿಚಾರದ ಸರಣಿ ಸಂಗೀತ-ಸಂಗತ ಕಾರ್ಯಕ್ರಮವನ್ನು ಸೆ. 26ರಂದು ಮಧ್ಯಾಹ್ನ 4.30ರಿಂದ ಏರ್ಪಡಿಸಲಾಗಿದೆ.
ಶ್ರೀಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಚಾರಗಳನ್ನು ಪ್ರಸ್ತುತಪಡಿಸಲಿದ್ದಾರೆ. ಜಯರಾಮ ಭಟ್ಟ ಹೆಗ್ಗಾರಳ್ಳಿ ಹಾಗೂ ಇತರರು ಸಂಗೀತ ಒದಗಿಸಲಿದ್ದಾರೆ. ಆಸಕ್ತರು ಪಾಲ್ಗೊಳ್ಳುವಂತೆ ಸುಷರ ಸಂಗೀತ ಪರಿವಾರದ ನಾರಾಯಣ ಕಲ್ಲಾರೆಮನೆ ಕೋರಿದ್ದಾರೆ.
ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ವಶ
ಸಿದ್ದಾಪುರ: ಅಕ್ರಮ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ಸಿದ್ದಾಪುರದ ತಹಶೀಲ್ದಾರು ದಾಳಿ ನಡೆಸಿ, ಪರಿಶೀಲನೆ ನಡೆಸಿದ ಘಟನೆ ನಡೆದಿದೆ. ತಾಲೂಕಿನ ಅಮೀನಾ ಸರ್ಕಲ್ ಬಳಿ ಕೆಎ.14,ಎ.6167 ನಂಬರ್’ನ ಲಾರಿಯಲ್ಲಿ ಅಕ್ಕಿ ಸಾಗಾಟ ಮಾಡುತ್ತಿರುವ ವಿಷಯ ತಿಳಿದ ತಹಶೀಲ್ದಾರ್ ಪ್ರಸಾದ್ ಲಾರಿಯನ್ನು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 50 ಕೆಜಿ ಬ್ಯಾಗ್’ನ 120 ಚೀಲ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಲಾರಿಯಲ್ಲಿ ಚಾಲಕನೊಬ್ಬ ಮಾತ್ರವೇ ಇದ್ದು, ಈತ ಅಕ್ಕಿಯನ್ನು ಮಹಾರಾಷ್ಟ್ರಕ್ಕೆ ಅಕ್ರಮ ಸಾಗಾಟ ನಡೆಸಲು ಪ್ರಯತ್ನಿಸುತ್ತಿದ್ದ ಎಂದು ತಿಳಿದು ಬಂದಿದೆ.