ಅಂಕೋಲಾ: ಇಂದು ರಜಾ ದಿನವಾದ ಕಾರಣ ಬೆಳಿಗ್ಗೆ ವಾಕಿಂಗ್ ಗೆ ತೆರಳಿದ್ದ ವ್ಯಕ್ತಿಯೋರ್ವ ಅಚಾನಕ್ ಆಗಿ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ, ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ
ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇಶನಬಾಗ್ ಸಮುದ್ರ ತೀರದಲ್ಲಿ ನಡೆದಿದೆ.
ಘಟನೆಯಲ್ಲಿ ಸಾವನ್ನಪ್ಪಿರಯವ ವ್ಯಕ್ತಿಯನ್ನು
ಸದ್ಯ ಕಾರವಾರ ತಾಲೂಕಿನ ಅರ್ಗ ನೇವಲ್ ಬೇಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾವಿಕೇರಿಯ ಪುರಂದರ ಶಿವಾನಂದ ನಾಯ್ಕ ಎಂದು ಗುರುತಿಸಲಾಗಿದೆ. ಈತ ಭಾರತೀಯ ನೌಕಾಸೇನೆಯಲ್ಲಿ ಸಿಬ್ಬಂದಿಯಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ,
ರವಿವಾರದ ರಜಾ ದಿನದಂದು ಅಂಕೋಲಾ ತಾಲೂಕಿನ ಭಾವಿಕೇರಿಯ ತನ್ನ ಮನೆಯ ಹತ್ತಿರವಿರುವ ಸಮುದ್ರ ತೀರಕ್ಕೆ ವಾಕಿಂಗ್ ಹೋದವನು, ಹತ್ತಿರದಲ್ಲಿ ತನ್ನ ಗೆಳೆಯರು ಮೀನು ಹಿಡಿಯುತ್ತಿರುವುದನ್ನು ಗಮನಿಸಿ,ಅಲ್ಲಿ ನೋಡಲು ಹೋದಾಗ ಅಕಸ್ಮಿಕವಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನಾ ಸ್ಥಳದ ಹತ್ತಿರ ಸಮುದ್ರದಲ್ಲಿ ಪುರಂದರ ನಾಯ್ಕ ಶವವಾಗಿ ಪತ್ತೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಅಂಕೋಲಾ ತಾಲೂಕ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ತನ್ನ ಚಿಕ್ಕಪ್ಪನ ಸಾವಿನ ಕುರಿತು ಬಾವಿಕೇರಿಯ ಸಂಜಯ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ. ಸ್ಥಳೀಯ ಮೀನುಗಾರರು ಹಾಗೂ ಬೇಲಿಕೇರಿ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಗಸ್ತು ಬೋಟ್ ಮೂಲಕ ಸಮುದ್ರದಲ್ಲಿ ಆತನ ಪತ್ತೆ ಕಾರ್ಯಾಚರಣೆ ನಡೆಸಿದರು. ಪಿಎಸ್ಐ ಪ್ರವೀಣ್ ಕುಮಾರ್ ಸ್ಥಳದಲ್ಲಿ ಹಾಜರಿದ್ದರು, ಸ್ಥಳೀಯ ಮುಖಂಡರು,ಊರ ನಾಗರಿಕರು ಸಹಕರಿಸಿದರು.