ಹೊನ್ನಾವರ : ಶಿವಲೀಲಾ ಕಲಾ ಪ್ರತಿಷ್ಠಾನ ಸಂಸ್ಥೆ (ರಿ)ಕಡತೋಕಾ ತನ್ನ ದಶಮಾನೋತ್ಸವ ಸಂಭ್ರಮಕ್ಕಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರನ್ನು ಸೇರಿಸಿ ಶ್ರೀ ಸ್ವಯಂಭೂ ದೇವಾಲಯದ ಸಭಾ ಭವನದಲ್ಲಿ ಸೆಪ್ಟೆಂಬರ್ 25 ರಂದು ಸಂಘಟಿಸಿದ್ದ ಮೋಕ್ಷ ಸಂಗ್ರಾಮ ಎಂಬ ಪೌರಾಣಿಕ ಯಕ್ಷಗಾನ ತಾಳಮದ್ದಳೆ ಕಿಕ್ಕಿರಿದ ಜನರ ಮೆಚ್ಚುಗೆಗೆ ಪಾತ್ರವಾಯಿತು.

ವಿಶೇಷವಾಗಿ ದ್ವಂದ್ವ ಭಾಗವತಿಕೆ,ಮದ್ದಳೆ ವಾದನ ಹಾಗೂ ಖ್ಯಾತನಾಮ ಅರ್ಥಧಾರಿಗಳು ಪಾಲ್ಗೊಂಡಿದ್ದು ಕಲಾಭಿಮಾನಿಗಳಲ್ಲಿ ಪ್ರತಿ ಹಂತದಲ್ಲೂ ಹರ್ಷ ಉಂಟುಮಾಡುವಲ್ಲಿ ಯಶಸ್ವಿಯಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪೆರ್ಡೂರು ಮೇಳದ ಪ್ರಧಾನ ಭಾಗವತ ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ಸಾಲಿಗ್ರಾಮ ಮೇಳದ ಪ್ರಧಾನ ಭಾಗವತ ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು ಆರಂಭದ ಗಣಪತಿ ಸ್ತುತಿಯಿಂದಲೇ ದ್ವಂದ್ವವಾಗಿ ವೈವಿಧ್ಯಮಯವಾಗಿ ಹಾಡುತ್ತ ಭಾಗವತಿಕೆಯ ರಸದೌತಣ ನೀಡಿ ಪ್ರೇಕ್ಷಕರಿಂದ ಕರತಾಡನಗಳ ಸುರಿಮಳೆ ಪಡೆದರು.

RELATED ARTICLES  ಜನ ಸಾಗರದ ನಡುವೆ ಹಿಂದೂ ಸಮಾಜೋತ್ಸವ ಸಂಪನ್ನ

ಇದೇ ಸಂದರ್ಭದಲ್ಲಿ ಮದ್ದಳೆ ವಾದನದಲ್ಲಿ ಪ್ರತಿಷ್ಠಾನದ ಮುಖ್ಯಸ್ಥರಾದ ಶ್ರೀ ಸುನೀಲ ಭಂಡಾರಿ ಕಡತೋಕಾ,ಶ್ರೀ ಮಂಜುನಾಥ ಭಂಡಾರಿ ಕಡತೋಕಾ ಹಾಗೂ ಚಂಡೆ ವಾದನದಲ್ಲಿ ಶ್ರೀ ರಮೇಶ ಭಂಡಾರಿ ಕಡತೋಕಾ ತಮ್ಮ ಕೈಚಳಕ ಪ್ರದರ್ಶಿಸಿದರು.ಮುಮ್ಮೇಳದ ಅರ್ಥಧಾರಿಗಳಾಗಿ ಶ್ರೀ ಜಬ್ಬಾರ್ ಸಮೋ ಅರ್ಜುನನಾಗಿ,ಶ್ರೀ ವಾಸುದೇವ ರಂಗ ಭಟ್ಟ ಸುಧನ್ವನಾಗಿ,ಶ್ರೀ ಪ್ರದೀಪ ಸಾಮಗ ಪ್ರಭಾವತಿಯಾಗಿ ಹಾಗೂ ಶ್ರೀ ಆನಂದ ಭಟ್ಟ ಕೆಕ್ಕಾರು ಕೃಷ್ಣನಾಗಿ ತಮ್ಮ ಮಾತಿನ ವರಸೆಗಳ ಮೂಲಕ ಯಕ್ಷಾಭಿಮಾನಿಗಳು ಮೈಮರೆಯುವಂತೆ ಮಾಡಿದರು.

ತಾಳಮದ್ದಳೆಯ ಪೂರ್ವದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಶ್ರೀ ಸತೀಶ ಭಟ್ಟ ಉಳಗೆರೆಯವರು ನವರಸ ಕಲೆ ಯಕ್ಷಗಾನದ ಒಂದು ಅಂಗವಾದ ತಾಳಮದ್ದಳೆಯ ಮಹತ್ವ ಕುರಿತು ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಶಂಕರ ಭಂಡಾರಿ,ದೇವಾಲಯದ ಕಮಿಟಿ ಸದಸ್ಯರಾದ ಶ್ರೀ ಶಂಭು ಹೆಗಡೆ ಸಂತನ್ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಾಸಿದ್ದ ದೇವಾಲಯದ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಸೂರ್ಯನಾರಾಯಣ ಹೆಗಡೆಯವರು ಕಲಾವಿದರು ಹಾಗೂ ಅತಿಥಿಗಳಿಗೆ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು.

RELATED ARTICLES  ಬೂತ್ ಮಟ್ಟದ ಸಭೆಗಾಗಿ ಪೂರ್ವಭಾವಿ ಸಭೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು

ಶ್ರೀ ಗುರು ಭಟ್ ಮಾಡಗೇರಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಯಕ್ಷ ಗುರು ಹಾಗೂ ಭಾಗವತರಾದ ಶ್ರೀ ಕೃಷ್ಣ ಭಂಡಾರಿ ಗುಣವಂತೆ ಇವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚಾರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರೀ ಪ್ರಭಾ ಸ್ಟುಡಿಯೋ ಸಿರ್ಸಿ ಇವರು ತಮ್ಮ ಯೂ ಟ್ಯೂಬ್ ಚ್ಯಾನಲ್ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮಾಡಿ ಸಹಸ್ರಾರು ಜನರು ವೀಕ್ಷಿಸಲು ಸಹಕರಿಸಿದರು.