ಭಟ್ಕಳ: ಇಲ್ಲಿನ ರಂಗೀಕಟ್ಟೆಯಲ್ಲಿರುವ ಬ್ಯಾಂಕೊಂದರ ಎಟಿಎಂ ರೂಮಿನಲ್ಲಿ ಹೊಗೆ ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ. ಖಾಸಗಿ ಬ್ಯಾಂಕೊಂದರ ಎ.ಟಿ.ಎಂ. ರೂಮಿನಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಗ್ರಾಹಕರೋರ್ವರು ಸುದ್ದಿ ತಿಳಿಸಿದ್ದು ತಕ್ಷಣ ಬಂದ ಅಗ್ನಿ ಶಾಮಕ ದಳದ ಅಧಿಕಾರಿ ರಮೇಶ ನಾಯ್ಕ ಅವರ ತಂಡ ಎ.ಟಿ.ಎಂ. ಒಳಗಡೆ ಇರುವ ಬ್ಯಾಟರಿ ರೂಮಿನಿಂದ ಹೊಗೆ ಬರುವುದನ್ನು ಗಮನಿಸಿ ತಕ್ಷಣ ರೂಮಿನ ಬಾಗಿಲನ್ನು ಒಡೆದು ಅಗ್ನಿ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಷ್ಟರಲ್ಲಾಗಲೇ ಮೂರು ಬ್ಯಾಟರಿಗಳು, ಯು.ಪಿ.ಎಸ್.ಗೆ ಹಾನಿಯಾಗಿತ್ತು ಎನ್ನಲಾಗಿದೆ. ತಕ್ಷಣ ಹಾನಿಯಾದ ವಸ್ತುಗಳನ್ನು ಹೊರಕ್ಕೆ ಹಾಕಿದ್ದರಿಂದ ಬೆಂಕಿ ಅನಾಹುತ ತಪ್ಪಿಸಿದಂತಾಗಿದೆ. ವಿದ್ಯುತ್ ವಯರಿಂಗ್‌ಗೆ ಕೂಡಾ ಹಾನಿಯಾಗಿದ್ದು ಒಟ್ಟೂ ಹಾನಿಯ ಅಂದಾಜು ಇನ್ನೂ ತಿಳಿದು ಬಂದಿಲ್ಲ.
ಶನಿವಾರ ಸಂಜೆಯೇ ರೂಮಿನಲ್ಲಿರುವ ಬ್ಯಾಟರಿಗಳಿಂದ ಸುಟ್ಟ ವಾಸನೆ ಬರುತ್ತಿರುವ ಕುರಿತು ಎ.ಟಿ.ಎಂ. ನಿರ್ವಾಹಕ ಎಜೆನ್ಸಿಗೆ ಹೇಳಿದ್ದರೂ ಸಹ ಅವರು ಬಂದು ಬ್ಯಾಟರಿಗಳನ್ನು ಪರೀಕ್ಷಿಸದೇ ಇರುವುದು ಘಟನೆಗೆ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿದೆ. ಅಲ್ಲದೇ ಬ್ಯಾಟರಿಗಳನ್ನು ಬಂದ್ ಮಾಡಿದ್ದ ರೂಮಿನಲ್ಲಿಟ್ಟಿರುವುದು ಕೂಡಾ ಬಿಸಿಯಾಗಿ ಅಗ್ನಿ ಅನಾಹುತಕ್ಕೆ ಕಾರಣ ಎಂದೂ ಹೇಳಲಾಗಿದೆ. ಘಟನೆಯಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.