ಗೋಕರ್ಣ : ಕಠಿಣ ನಿಯಮಗಳಿಂದಾಗಿ ಕಳೆದ ಕೆಲವು ದಿನಗಳಿಂದ ಸಮುದ್ರದಲ್ಲಿ ಈಜುವುದು ಹಾಗೂ ಪ್ರವಾಸಕ್ಕೆ ಬರುವವರು ಅಪಾಯದಲ್ಲಿ ಸಿಲುಕುವ ಪ್ರಕರಣಗಳು ಕಡಿಮೆಯಾಗಿದ್ದವು. ಇದೀಗ ಮತ್ತೆ ಅಂತಹುದೇ ಪ್ರಕರಣಗಳು ಬೆಳಕಿಗೆ ಬಂದಿದ್ದು ಪ್ರವಾಸಿಗರು ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಿದೆ. ಗೋಕರ್ಣದ ಮುಖ್ಯ ಕಡಲತೀರದಲ್ಲಿ ಇಂದು ಸಮುದ್ರದಲ್ಲಿ ಈಜಲು ಹೋಗಿ ಸಮುದ್ರ ಪಾಲಾಗುತಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.
ರಕ್ಷಿಸಲ್ಪಟ್ಟ ಪ್ರವಾಸಿಗನನ್ನು ಹುಬ್ಬಳ್ಳಿ ಮೂಲದ ರೋಹಿತ್ ಪಾಟೀಲ್ ಎಂದು ಗುರುತಿಸಲಾಗಿದೆ. ಐದು ಜನರು ಹುಬ್ಬಳ್ಳಿಯ ರೇಣುಕಾ ನಗರದಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದರು. ಈ ವೇಳೆ ಸಮುದ್ರಕ್ಕೆ ಇಳಿದಿದ್ದ ರೋಹಿತ್ ಅಲೆಯ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿದ್ದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಮಂಜುನಾಥ್ ಉಪ್ಪಾರ್, ಪ್ರವಾಸಿ ಮಿತ್ರ ಶೇಖರ್ ಹರಿಕಾಂತ್ , ಲೈಫ್ ಗಾರ್ಡ ರವಿ ಪೂಜಾರಿ ರವರು ಸ್ಥಳೀಯರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.