ಕಾರವಾರ: ಶಿರಸಿನಗರದ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಂಡಲ್ ಗ್ರಾಮದ ಕಲ್ಲೇಶ್ವರ ದೇವಸ್ಥಾನ ಹಾಗೂ ಓಣಿ ವಿಘ್ನೇಶ್ವರ ಗ್ರಾಮದ ಗಣಪತಿ ದೇವಸ್ಥಾನದಲ್ಲಿ ಕಳ್ಳತನ ಮಾಡಲಾಗಿತ್ತು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದ ಪೊಲೀಸರು ದೇವಸ್ಥಾನ ಹಾಗೂ ಬೈಕ್ ಕಳ್ಳತನ ಮಾಡುತಿದ್ದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ಆರೋಪಿತರನ್ನ ವಶಕ್ಕೆ ಪಡೆದಿರುವ ಪೊಲೀಸರು ಈ ಬಗ್ಗೆ ಮುಂದಿನ ತನಿಖೆ ಪ್ರಾರಂಭಿಸಿದ್ದಾರೆ. ಬಂಧಿತರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಜಮ್ಮನಹಳ್ಳಿಯ ಲಿಂಗರಾಜು , ಶಿರಸಿ ತಾಲೂಕಿನ ಕೊಂಡಲಿಗಿಯ ಪ್ರವೀಣ್ ಎಂದು ಗುರುತಿಸಲಾಗಿದೆ.
ಪ್ರಕರಣದ ಒಂದನೇ ಆರೋಪಿ ಲಿಂಗರಾಜು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಹಳೇಬೀಡು, ಹುಬ್ಬಳ್ಳಿ,ವಿಜಾಪುರ,ಗದಗ, ಗೋಕಾಕ ಗಳಲ್ಲಿ ಬೈಕ್ ಕಳವು ಮಾಡಿದ್ದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನಿಂದ ಮುಂಡಗೋಡ ಹಾಗೂ ಹಳೇಬೀಡು ಪೊಲೀಸ್ ಠಾಣೆಯ ಪ್ರಕರಣಗಳಿಗೆ ಸಂಬಂಧಿಸಿದ ಕಳ್ಳತನ ಮಾಡಿದ ಒಟ್ಟು 03 ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ.
ಈತನ ಮೇಲೆ ಈ ಹಿಂದೆ ಬೇಲೂರು ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಮಂಕಿ,ಮೂಡಬಿದಿರೆ, ಬಿಜಾಪುರಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದು ,ಮೂರನೇ ಆರೋಪಿ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿಯ ಅಜಿತ್ ತಲೆಮಾರೆಸಿಕೊಂಡಿದ್ದು ತನಿಖೆ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಶಿರಸಿ ಉಪವಿಭಾಗದ ಡಿವೈಎಸ್ ಪಿ ರವಿ ಡಿ. ನಾಯ್ಕ್, ಶಿರಸಿ ವೃತ್ತದ ಸಿಪಿಐ ರಾಮಚಂದ್ರ ನಾಯಕ ರವರ ಮಾರ್ಗದರ್ಶನದಲ್ಲಿ ಶಿರಸಿ ಗ್ರಾಮೀಣ ಠಾಣೆಯ ಪಿಎಸ್ ಐ ಈರಯ್ಯ, ಯಲ್ಲಾಪುರ ಠಾಣಾ ಮಹಿಳಾ ಪಿಎಸ್ ಐ ಪ್ರಿಯಾಂಕಾ ಸಿಬ್ಬಂದಿಗಳಾದ ಮಹದೇವ್ ನಾಯ್ಕ್,ಚೇತನ್ ಕುಮಾರ್,ಗಣಪತಿ,ಸುರೇಶ ಕಟ್ಟಿ, ಚೇತನ್,
ಮಹಮ್ಮದ್ ಶಫಿ ಶೇಕ್,ಕೋಟೇಶ್,ಬಸವರಾಜ್ ಹಗರಿ, ವಿನೋದ್ ರೆಡ್ಡಿ,ಬಸವರಾಜ್ ಡಿ. ಕೆ.,ಸುಧೀರ್ ಮಡಿವಾಳ ಭಾಗವಹಿಸಿದ್ದರು.