ಹೊನ್ನಾವರ: ಜಿಲ್ಲೆಯ ಗ್ರಾಮೀಣ ಭಾಗಗಳ ಸಾಂಪ್ರದಾಯಿಕ ಸಾವಯವ ಶಾಖಾಹಾರಿ ಅಡುಗೆ ಸಾಮಗ್ರಿಗಳನ್ನು ಉತ್ಪಾದಿಸಿ ವಿತರಿಸುವ ಮಹತ್ತರ ಉದ್ದೇಶದೊಂದಿಗೆ ಇಂದಿನ ಆಧುನಿಕ ಜಗತ್ತಿಗೆ ಸ್ಪರ್ಧೆಯಲ್ಲಿ ನಿಲ್ಲಬಲ್ಲ ಹಾಗೂ ಆನ್ ಲೈನ್ ಮೂಲಕವೂ ಪೂರೈಕೆ ಮಾಡಬಲ್ಲ ಯೋಜನೆಯೊಂದಿಗೆ ಸಾಹಸಿ ಯುವಕರು ಸೇರಿ ಪ್ರಾರಂಭಿಸಿರುವ “ಫಾರ್ಮಿನ್” ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮವು ತಾಲೂಕಿನ ಜೇನು ಸೊಸೈಟಿ ಆವರಣದಲ್ಲಿ ನಡೆಯಿತು.
ಸಾವಯವ ಉತ್ಪನ್ನಗಳಿಗೆ ದೊಡ್ಡ ಪ್ರಮಾಣದಲ್ಲಿ ಪೇಟೆ ಕಲ್ಪಿಸಿ ಹೆಣ್ಣುಮಕ್ಕಳ ತವರುಮನೆ ಎಂದು ಪ್ರಸಿದ್ಧಿ ಪಡೆದ ಕದಂಬ ಸಂಸ್ಥೆಯ ಅಧ್ಯಕ್ಷರೂ, ಕ್ಯಾಂಪ್ಲೋ ನಿರ್ದೇಶಕರಾದ ಶಂಭುಲಿಂಗ ಹೆಗಡೆ ದೀಪ ಬೆಳಗಿ, ಉತ್ಪನ್ನಗಳನ್ನುಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಜಿಲ್ಲೆಯ ಹಳ್ಳಿಹಳ್ಳಿಗಳಲ್ಲಿ ಸಾಂಪ್ರದಾಯಿಕವಾದ, ಶುಚಿರುಚಿಯಾದ, ರಾಸಾಯನಿಕಗಳ ಬೆರಕೆಯಿಲ್ಲದ ನೂರಾರು ತಂಬಳಿ, ಹಸಿ ಗೊಜ್ಜು, ಉಪ್ಪಿನಕಾಯಿ, ಹಪ್ಪಳ ಮೊದಲಾದ ಉತ್ಪನ್ನಗಳಿವೆ. ಇವುಗಳನ್ನು ಪೇಟೆಯ ಜನ ಬಯಸುತ್ತಾರೆ. ಆದ್ದರಿಂದ ಇದೇ ಉದ್ದೇಶಕ್ಕೆ ಆರಂಭಿಸಲಾದ ಕದಂಬ ಯಶಸ್ವಿಯಾಗಿ ಮುನ್ನಡೆದಿದೆ. ಉತ್ತಮ ಗುಣಮಟ್ಟದ, ಒಳ್ಳೆಯ ಪ್ಯಾಕಿಂಗ್‌ವುಳ್ಳ ಆಹಾರ ಪದಾರ್ಥಗಳು ಎಷ್ಟಿದ್ದರೂ ನಾವು ಮಾರುಕಟ್ಟೆ ಕಲ್ಪಿಸುತ್ತೇವೆ. ಇಂದು ಚಾಲನೆ ದೊರೆತ ಫಾರ್ಮಿನ್‌ಗೆ ಕದಂಬ ತಾಯಿಯ ಸ್ಥಾನದಲ್ಲಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಉದ್ಯಮಿ ಮಂಜುನಾಥ ಭಟ್ಟ ಸುವರ್ಣಗದ್ದೆ, ಪತ್ರಕರ್ತ ಜಿ.ಯು.ಭಟ್ ಮಾತನಾಡಿ ಬೆಂಗಳೂರಿತಹ ಶಹರದಿಂದ ಬಂದು ಇಲ್ಲಿ ಸಾಹಸ ಮಾಡಿ ಇಂತಹ ಯೋಜನೆ ರೂಪಿಸಿರುವ ಯುವಕರ ಸಾಹಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಲವು ಉತ್ಪನ್ನಗಳಿಗೆ ಕದಂಬ ಸಂಸ್ಥೆ ನೆಲೆಯೂರಲು ಸಹಕರಿಸಿದೆ. ಜಿಲ್ಲೆಯಲ್ಲಿ ಇಂತಹ ಹಲವು ಉತ್ಪನ್ನಗಳು ಆಗಮಿಸಬೇಕಿದೆ. ಆ ಮೂಲಕ ಇಲ್ಲಿ ಯಶ್ವಸಿ ಉದ್ಯಮ ಆರಂಭವಾಗುವ ಮೂಲಕ ಅಭಿವೃದ್ದಿ ಕಾಣಲಿ ಎಂದು ಶುಭ ಹಾರೈಸಿದರು. ಪ್ರಸನ್ನ ಹೆಗಡೆ ಅತಿಥಿಗಳನ್ನು ಗೌರವಿಸಿದರು. ಗಣೇಶ ಹೆಗಡೆ ಮಾಗೋಡು ಸ್ವಾಗತಿಸಿದರು. ವಿನಾಯಕ ಹೆಬ್ಬಾರ ವಂದಿಸಿದರು. ರವೀಂದ್ರ ಭಟ್ಟ ಸೂರಿ ನಿರೂಪಿಸಿದರು.