ರಾಷ್ಟ್ರೀಯ ಪೋಷಣಾ ಮಾಶಾಚರಣೆಯ ಅಭಿಯಾನದ ಪ್ರಯುಕ್ತ ಹೆಬಳೆ ಗೊರಟೆಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಪೋಷಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಹೆಬಳೆ ಗ್ರಾಮಪಂಚಾಯತ ಸದಸ್ಯರಾದ ರಾಮ ಹೆಬಳೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಇದೊಂದು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಹದಿಹರೆಯದ ಬಾಲಕಿಯರು, ಗರ್ಭಿಣಿ ಸ್ತ್ರೀಯರು ಹಾಗೂ ಹಾಲುಣಿಸುವ ಬಾಣಂತಿಯರನ್ನು ಗುರುತಿಸಿ ಅವರುಗಳಿಗೆ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವಲ್ಲಿ ನಾವೆಲ್ಲರೂ ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕು. ಚಿಕ್ಕ ಮಕ್ಕಳು ಹಾಗು ತಾಯಂದಿರು ರಕ್ತಹೀನತೆ ಹಾಗೂ ಇನ್ನಿತರ ಗಂಭೀರ ಕಾಯಿಲೆಗಳಿಂದ ಮುಕ್ತವಾಗಿರಲು ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಜವಾಬ್ದಾರಿಯುತವಾದ ಪಾತ್ರ ತುಂಬಾ ಮಹತ್ವದ್ದಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಟ್ಕೂರ್ ಕ್ಲಸ್ಟರ್ ಮಟ್ಟದ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಶ್ವೇತಾ ನಾಯ್ಕ ಮಾತನಾಡಿ ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಮೂಲಕ ಅಪೌಷ್ಟಿಕತೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸೆಪ್ಟೆಂಬರ್ ತಿಂಗಳು ಸಂಪೂರ್ಣವಾಗಿ ರಾಷ್ಟ್ರೀಯ ಪೋಷಣ್ ಮಾಶಾಚರಣೆ ಮೂಲಕ ಅಭಿಯಾನವನ್ನು ನಡೆಸಲಾಗುತ್ತಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಪೌಷ್ಟಿಕ ಆಹಾರವನ್ನು ಒದಗಿಸಲಾಗುತ್ತಿದೆ. ಇಲ್ಲಿನ ತಾಯಂದಿರು ಕೂಡ ಸ್ಥಳೀಯವಾಗಿಯೇ ತರಕಾರಿಗಳನ್ನು ಬೆಳೆದು ಅಂತಹ ಆಹಾರವನ್ನೇ ಸೇವಿಸಿ ಉತ್ತಮ ಆರೋಗ್ಯ ಹೊಂದುವುದರ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮಹಿಳೆಯರು ಬೆಳೆದ ಪೌಷ್ಟಿಕಾಂಶಯುಕ್ತ ತರಕಾರಿಗಳನ್ನು ಅಲಂಕಾರಿಕವಾಗಿ ಪ್ರದರ್ಶನಕ್ಕೆ ಇಟ್ಟಿರುವುದು ವಿಶೇಷವಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಬ್ರಾಯ ನಾಯ್ಕ ವಹಿಸಿದ್ದರು. ಉಪಾಧ್ಯಕ್ಷರಾದ ಮಂಜುಳಾ ನಾಗೇಶ್, ಅಂಗನವಾಡಿ ಕಾರ್ಯಕರ್ತೆ ಸುಜಾತಾ ನಾಯ್ಕ, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಊರಿನ ಮಾತೆಯಂದಿರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಮುಖ್ಯ ಶಿಕ್ಷಕರಾದ ಶಿವಾನಂದ ಹರಿಕಾಂತ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರೆ, ಸಹ ಶಿಕ್ಷಕರಾದ ನಾಗಪ್ಪಯ್ಯ ಆಚಾರ್ಯ ವಂದನಾರ್ಪಣೆಗೈದರು.
ಚಿತ್ರ ವರದಿ: ರಾಮ ಹೆಬಳೆ, ಶೇಡಬರಿ, ಭಟ್ಕಳ