ಕುಮಟಾ: ಅಂಗನವಾಡಿ ಕಾರ್ಯಕರ್ತೆಯರ ವಿಚಾರದಲ್ಲಿ ನಮ್ಮ ಬಿಜೆಪಿ ಸರಕಾರದ ನಿರ್ಲಕ್ಷ್ಯ ಧೋರಣೆ ನನಗೂ ಬೇಸರ ಉಂಟುಮಾಡಿದ್ದು, ಅದನ್ನು ಹೇಳಿಕೊಳ್ಳಲಾಗದೇ ಸುಮ್ಮನಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಾ.ಪಂ ಸಭಾಭವನದಲ್ಲಿ ಗುರುವಾರ ನಡೆದ ಯೋಜನಾ ಮಟ್ಟದ ಪೋಷಣಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,” ನಮ್ಮ ಅಂಗನವಾಡಿ ಕಾರ್ಯಕರ್ತೆಯರಿಂದ ಸರ್ಕಾರ ಎಲ್ಲಾ ಕೆಲಸವನ್ನು ಮಾಡಿಸಿಕೊಳ್ಳುತ್ತದೆ. ಆದರೆ ಅವರಿಗೆ ನೀಡಲಾಗುವ ಕಡಿಮೆ ಗೌರವ ಧನವನ್ನು ಕೂಡ ಸಮಯಕ್ಕೆ ಸರಿಯಾಗಿ ನೀಡುವುದಿಲ್ಲ. ಇದನ್ನು ನೋಡಿದಾಗ ನಮ್ಮ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತದೆ ಎಂದು ನನಗೂ ಅನಿಸುತ್ತದೆ. ಆದರೆ ಈ ಬಗ್ಗೆ ನಾನು ಮಾತನಾಡಿದರೇ ಅದು ಉಲ್ಟಾ ಆಗುತ್ತದೆ. ಅದಕ್ಕೆ ಸುಮ್ಮನಿರಬೇಕಾಗಿದೆ. ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಇವೆಲ್ಲವನ್ನೂ ಸರಿ ಮಾಡುತ್ತದೆ ಎಂಬ ವಿಶ್ವಾಸವಿದೆ. ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಯೋಜನೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಾಯಕಾರಿಯಾಗಿದೆ. ನಮ್ಮ ಮಹಿಳೆಯರ ಕೈಗುಣ ಚೆನ್ನಾಗಿದೆ ಎಂಬುದಕ್ಕೆ ಇಷ್ಟೆಲ್ಲ ತಿಂಡಿ-ತಿನಿಸುಗಳನ್ನು ನೋಡಿದರೆ ತಿಳಿಯುತ್ತದೆ “ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ 4 ಅಂಗವಿಕಲ ಫಲಾನುಭವಿಗಳಿಗೆ ದ್ವಿಚಕ್ರ ವಾಹನ ಮತ್ತು ಇಬ್ಬರು ಫಲಾನುಭವಿಗಳಿಗೆ ಹೋಲಿಗೆ ಯಂತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಡಿಪಿಒ ನಾಗರತ್ನ ನಾಯಕ ವಹಿಸಿದ್ದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ ಟಿ ನಾಯ್ಕ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ಮಾತನಾಡಿದರು. ಜಿಪಂ ಎಇಇ ಆರ್.ಜಿ.ಗುನಗಿ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.