ಕಾರವಾರ: ಅಕ್ರಮ ಕಟ್ಟಡ ಕಟ್ಟಿ, ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವ ನಗರದ ಡಾ| ಪಿಕಳೆ ರಸ್ತೆಯಲ್ಲಿರುವ ಎರಡು ಕಟ್ಟಡಗಳ ಮಾಲೀಕರಿಗೆ ಸೇರಿದಂತೆ ಒಟ್ಟು ಏಳು ಜನರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಕೇವಲ ಕೆಡಿಎ ಅನುಮತಿ ಪಡೆದು ನಗರಸಭೆಯ ಅನುಮತಿ ಪಡೆಯದೇ, ನಗರಸಭೆಗೆ ಒಂದೂ ಪೈಸೆ ತೆರಿಗೆ ಕಟ್ಟದೆ ವಾಣಿಜ್ಯ ವಹಿವಾಟು ನಡೆಸುತ್ತಿರುವ ಬೃಹತ್ ಮಾಲ್ ನಡೆಯುತ್ತಿರುವ ಕಟ್ಟಡದ ಮಾಲೀಕರಿಗೆ ನಗರಸಭೆಯ ಪೌರಾಯುಕ್ತರು ಜಿಲ್ಲಾಧಿಕಾರಿಗಳ ಸೂಚನೆ ಪಡೆದು ನೋಟಿಸ್ ಜಾರಿ ಮಾಡಿದ್ದಾರೆ.
ವಾಣಿಜ್ಯ ವಹಿವಾಟಿನ ಪರವಾನಗಿ ಮತ್ತು ನಗರಸಭೆಯ ನಿಯಮಗಳನ್ನು ಮೂರು ದಿನಗಳಲ್ಲಿ ಪೂರೈಸದಿದ್ದರೆ ವ್ಯಾಪಾರದ ಮಾಲ್ ಗೆ ಬೀಗ ಹಾಕುವ ಎಚ್ಚರಿಕೆಯನ್ನು ನಗರಸಭೆಯ ಅಧಿಕಾರಿ ವರ್ಗ ನೀಡಿದೆ. ಅಲ್ಲದೇ ಸಾರ್ವಜನಿಕ ಜಾಗವನ್ನೇ ಪಾರ್ಕಿಂಗ್ ಜಾಗವಾಗಿ ತೋರಿಸಿ ನಿಯಮ ಉಲ್ಲಂಘನೆಯಾಗಿರುವುದನ್ನು ಸಹ ಉಲ್ಲೇಖೀಸಲಾಗಿದೆ.
ಹಿಂದಿನ ಪೌರಾಯುಕ್ತರ ಅವಧಿಯಲ್ಲಿ ನಡೆದ ಒಂದೊಂದೇ ಹಗರಣಗಳು ಬೆಳಕಿಗೆ ಬರುತ್ತಿದ್ದು, ಸರ್ಕಾರಿ ಜಾಗ ಕಬಳಿಕೆ ಮತ್ತು ನಿಯಮ ಬಾಹಿರವಾಗಿ ಕಟ್ಟಡಗಳನ್ನು ಕಟ್ಟುವುದು, ನಗರಸಭೆಯ ನಂಬರ್‌ನ್ನು ಕಟ್ಟಡಗಳಿಗೆ ಪಡೆಯದೇ ಅಪಾರ್ಟ್‌ಮೆಂಟ್ ಮಾರಾಟ ಮಾಡುತ್ತಿರುವ ಪ್ರಕರಣಗಳು ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ನಗರದ ಡಾ| ಪಿಕಳೆ ರಸ್ತೆಯ ವೆಸ್ಟ್‌ಎಂಡ್ ವಸತಿ ಗೃಹ ಪಾರ್ಕಿಂಗ್ ಜಾಗವನ್ನು ರಿಸಪ್ಶನ್ ಗಾಗಿ ಬಳಸಿಕೊಂಡಿದೆ. ಇದನ್ನು ಮೂಲ ನಕಾಶೆಯಲ್ಲಿ ತೋರಿಸಿದಂತೆ ಪಾರ್ಕಿಂಗ್ ಜಾಗವಾಗಿ ಬದಲಿಸಬೇಕೆಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಈ ಬದಲಾವಣೆಗೆ ಸಮಯ ಸಹ ನೀಡಲಾಗಿದೆ.
ನೋಟಿಸ್‌ಗೆ ಮೂರು ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ. ಕೋಡಿಭಾಗದ ಮೂರು ಅಪಾರ್ಟಮೆಂಟ್ ಗಳು ಕೆಡಿಎ ಅನುಮತಿ ಪಡೆದು, ನಗರಸಭೆಯಿಂದ ಯಾವುದೇ ಅನುಮತಿ ಪಡೆಯದೇ ಪೂರ್ಣವಾಗಿದೆ. ಅಲ್ಲದೇ, ಪಾರ್ಕಿಂಗ್ ಜಾಗದಲ್ಲಿ ಮನೆ ಪೂರ್ಣಗೊಳಿಸಿ ಮಾರಾಟ ಮಾಡಿದ್ದು, ನಗರಸಭೆಯ ಗಮನಕ್ಕೆ ಬಂದಿದೆ.
ಈ ಸಂಬಂಧ ಅಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ಹೈಚರ್ಚ್ ರಸ್ತೆಯ ಎರಡು ಅಪಾರ್ಟಮೆಂಟ್‌ಗಳು ನಿರ್ಮಾಣ ಹಂತದಲ್ಲಿದ್ದು, ಅಲ್ಲಿ ಸಹ ಪಾರ್ಕಿಂಗ್ ಜಾಗ ಬಳಸಿ ಮನೆ ಕಟ್ಟುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಪೌರಾಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ.
ಇನ್ನು ಹದಿನೈದು ಕಟ್ಟಡಗಳಲ್ಲಿ ಉಲ್ಲಂಘನೆ: ನಗರಸಭೆಯ ಅಂತರಿಕ ಮಾಹಿತಿ ಪ್ರಕಾರ ನಗರದಲ್ಲಿ 15 ಬೃಹತ್ ಅಪಾರ್ಟಮೆಂಟ್‌ಗಳು ನಿಯಮ ಉಲ್ಲಂಘಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿಗಳು ಈ ಎಲ್ಲ ಅಕ್ರಮಗಳು ಮತ್ತು ಕಾನೂನು ಬಾಹಿರ ಕಟ್ಟಡ ನಿರ್ಮಾಣವನ್ನು ಗಮನಿಸುತ್ತಿದ್ದು, ಪೌರಾಯುಕ್ತರ ಮೂಲಕ ಸೂಕ್ತ ಕಾನೂನು ಕ್ರಮಕ್ಕೆ ಮುಂದಡಿ ಇಡುತ್ತಿದ್ದಾರೆ.
ತಕ್ಷಣಕ್ಕೆ ಪತ್ತೆಯಾದ ಬಿಗ್ ಶಾಟ್‌ಗಳ ಏಳು ಕಟ್ಟಡಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ತಿಳಿಸಿ ಎಚ್ಚರಿಕೆಯ ನೋಟಿಸ್ ಜಾರಿ ಮಾಡಲಾಗಿದೆ. ಉಲ್ಲಂಘನೆಯನ್ನು ಸರಿ ಮಾಡಿಕೊಳ್ಳಲು ಅವಕಾಶ ಸಹ ನೀಡಲಾಗಿದೆ.
ವರದಿ: ಎಸ್ ರಾಜೀವ ಕಾರವಾರ