ಶಿರಸಿ : ಚಿರತೆಗಳು ಹಾಗೂ ಇತರ ಕಾಡು ಪ್ರಾಣಿಗಳು ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುವುದು ಆಗಾಗ ಸುದ್ದಿಯಾಗುತ್ತಿದ್ದು ಇಂತಹುದೇ ಪ್ರಕರಣವೊಂದು ವರದಿಯಾಗಿದೆ. ಶಿರಸಿ ತಾಲೂಕಿನ ಗ್ರಾಮಾಂತರ ಭಾಗವಾದ ಬೊಪ್ಪನಳ್ಳಿಯಲ್ಲಿ ಗರ್ಭಿಣಿ ಹಸುವೊಂದರ ಮೇಲೆ ಚಿರತೆ ದಾಳಿ ನಡೆಸಿ ಹಸುವನ್ನು ಕೊಂದಿರುವ ಘಟನೆ ನಡೆದಿದೆ.
ಕಳೆದ ಕೆಲವು ತಿಂಗಳುಗಳ ಈಚೆಗೆ ಈ ಭಾಗದಲ್ಲಿ 5-6 ದನಗಳು ಈ ರೀತಿ ಚಿರತೆ ದಾಳಿಗೆ ತುತ್ತಾಗಿರುವುದು ಸ್ಥಳೀಯರಿಗೆ ಭಯವನ್ನು ಹೆಚ್ಚಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಬೊಮ್ಮನಳ್ಳಿಯ ಸುಬ್ರಾಯ ಹೆಗಡೆ ಮನೆಯ ಹಸುವನ್ನು ಎಂದಿನಂತೆ ಮೇಯಲು ಬಿಡಲಾಗಿತ್ತು. ಗುರುವಾರ ಬೆಳಿಗ್ಗೆ ಕೊಟ್ಟಿಗೆಯಿಂದ ತೆರಳಿದ ಹಸು, ರಾತ್ರಿಯಾದರೂ ಹಿಂತಿರುಗಿ ಬಾರದಿದ್ದಾಗ, ಶುಕ್ರವಾರ ಬೆಳಿಗ್ಗೆ ಮನೆ ಮಂದಿ ಹಸು ಹುಡುಕಲು ಹೊರಟರು. ಮನೆಯಿಂದ 1 ಕಿ.ಮೀ ದೂರವಿರುವ ಬೆಟ್ಟದಲ್ಲಿ ಬಿದ್ದಿರುವ ಹಸುವನ್ನು ನೋಡಿದಾಗ, ಹಸುವಿನ ಕುತ್ತಿಗೆ ಭಾಗದಲ್ಲಿ ಯಾವುದೋ ಪ್ರಾಣಿ ಕಚ್ಚಿರುವ ಗುರಿತುಗಳು ಕಂಡುಬಂದಿದ್ದು, ಚಿರತೆಯ ದಾಳಿಗೆ ಹಸು ಪ್ರಾಣ ಬಿಟ್ಟಿದೆ ಎಂದು ಅಂದಾಜಿಸಲಾಗಿದೆ.