ಕಾಳಿಂಗ ನಾವಡ ಪ್ರಶಸ್ತಿಗೆ ಮದ್ದಳೆ ಕಲಾವಿದ ಶಂಕರ ಭಾಗವತ ಆಯ್ಕೆ
ಯಲ್ಲಾಪುರದ ಕಲಾ ಕದಂಬ ಆರ್ಟ್ ಸೆಂಟರ್ ಸಂಸ್ಥೆಯು 11 ವರ್ಷಗಳಿಂದ ಯಕ್ಷಲೋಕದ ಹಿಮ್ಮೇಳ ಕಲಾವಿದರಿರೆ ನೀಡುವ ಕಾಳಿಂಗ ನಾವಡ ಪ್ರಶಸ್ತಿಗೆ ಮದ್ದಳೆ ಕಲಾವಿದ, ಯಲ್ಲಾಪುರದ ಶಂಕರ ಭಾಗವತ ಆಯ್ಕೆಯಾಗಿದ್ದಾರೆ. ಅಂಬರೀಷ್ ಭಟ್, ದೇವರಾಜ ಕರಬ, ವಿಶ್ವನಾಥ ಉರಾಳ, ಮಮತಾ ಆರ್. ಕೆ. , ಮುರಳೀಧರ ನಾವಡ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ. 10 ಸಾವಿರ ನಗದು ಹಾಗೂ ಬೆಳ್ಳಿತಟ್ಟೆ ಒಳಗೊಂಡಿದೆ.
ಶ್ರೀಕ್ಷೇತ್ರ ಗೋಕರ್ಣದಲ್ಲಿ ಆತ್ಮಲಿಂಗ ಸ್ಪರ್ಶ ದರ್ಶನ ಪುನಃ ಆರಂಭ
ಕೋವಿಡ್ ಸೋಂಕು ಹರಡುವ ಭೀತಿಯಿಂದ ಪುರಾಣ ಪ್ರಸಿದ್ಧ ಇಲ್ಲಿನ ಮಹಾಬಲೇಶ್ವರ ದೇವಾಲಯದಲ್ಲಿ ಕಳೆದ ಆರು ತಿಂಗಳ ಹಿಂದೆ ಆತ್ಮಲಿಂಗ ಸ್ಪರ್ಶ ದರ್ಶನ ನಿಲ್ಲಿಸಲಾಗಿತ್ತು. ಇದೀಗ ಶ್ರೀಕ್ಷೇತ್ರ ಗೋಕರ್ಣದಲ್ಲಿ ಆತ್ಮಲಿಂಗ ಸ್ಪರ್ಶ ದರ್ಶನ ಪುನಃ ಆರಂಭ ಮಾಡಲಾಗಿದೆ. ಹೀಗಾಗಿ ಇದೀಗ ಪ್ರವಾಸಿಗರ ಆಗಮನವೂ ಹೆಚ್ಚತೊಡಗಿದೆ. ರಾಜ್ಯದ ವಿವಿಧೆಡೆ ಮತ್ತು ಹೊರ ರಾಜ್ಯದಿಂದ ಸಹ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ, ದೇವರ ದರ್ಶನ ಪಡೆದಿದ್ದಾರೆ. ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ ಮಾಡಲಾಗಿದೆ.
ಕಾರಿನ ಚಕ್ರ ಸ್ಫೋಟ : ಗೋಕರ್ಣದ ಮೇಲಿನಕೇರಿ ಬಳಿ ಘಟನೆ
ಚಲಿಸುತ್ತಿದ್ದ ಕಾರಿನ ಚಕ್ರ ಸ್ಫೋಟಗೊಂಡ ಘಟನೆ ಗೋಕರ್ಣದ ಮೇಲಿನಕೇರಿಯ ಆಚಾರಿ ಕಟ್ಟೆ ಬಳಿ ಇಂದು ನಡೆದಿದೆ. ಹಾಸನ ಮೂಲದ ಪ್ರವಾಸಿಗರ ವಾಹನ ಇದಾಗಿದ್ದು, ಕಾರಿನ ಚಾಲಕನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸದಾ ವಾಹನ ಸಂಚಾರವಿರುವ ಈ ರಸ್ತೆಯಲ್ಲಿ ಈ ಅವಘಡ ನಡೆದಿದ್ದು, ಅದಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ.