ಗೋಕರ್ಣ : ಕಾಡು ಪ್ರಾಣಿಗಳು ಆಹಾರವನ್ನು ಅರಸಿ ನಾಡಿಗೆ ಬರುವುದು ಸಹಜ. ಅಂಥದೇ ಘಟನೆಯೊಂದು ವರದಿಯಾಗಿದೆ. ಆಕಸ್ಮಿಕವಾಗಿ ಗೋಕರ್ಣದ ಮನೆಗೆ ಬಂದ ಕಬ್ಬೆಕ್ಕು (ಕಾಡಿನ
ಬೆಕ್ಕು) ಹಿಡಿದು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಇಂದು ನಡೆದಿದೆ.
ಮಹಾಬಲೇಶ್ವರ ದೇವಾಲಯದ ಪಶ್ಚಿಮ ದ್ವಾರದ ಮುಂಭಾಗದ ಮನೆಯೊಂದರ ಛಾವಣಿ ಮೇಲೆ ಭಯದಿಂದ ಓಡಾಡುತ್ತಾ ಇರುವುದು ಕಂಡು ಬಂದಿದೆ. ತಕ್ಷಣ ಸಾರ್ವಜನಿಕರು ಅರಣ್ಯ ಇಲಾಖೆಯವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಉರಗ ತಜ್ಞ ತದಡಿಯ ಅಶೋಕ ನಾಯ್ಕರವರನ್ನು ಕರೆಸಿ ಸುರಕ್ಷಿತವಾಗಿ ಹಿಡಿದ್ದಾರೆ.
ನಿತ್ರಾಣಗೊಂಡ ಬೆಕ್ಕನ್ನು ಉಪಚರಿಸಿ ನಂತರ ಕಾಡಿಗೆ ಬಿಡಲಾಗಿದೆ. ಪ್ರಾಣಿ ಪ್ರಿಯ ಸುಜಯ ಶೆಟ್ಟಿ ಗೋಕರ್ಣ ಮತ್ತು ಸ್ಥಳೀಯ ಅಂಗಡಿಕಾರರು ಮತ್ತಿತರರು ಸಹಕರಿಸಿದರು.
ಕಾಡುಬೆಕ್ಕಿನ ಮೂಗು ಸದಾ ಒದ್ದೆಯಾಗಿರುತ್ತದೆ. ವಾಸನೆಯಿಂದಲೇ ಆಹಾರವನ್ನು ಗುರುತಿಸಲು ಈ ತೇವವಾಗಿರುವ ಮೂಗು ಸಹಾಯ ಮಾಡುತ್ತದೆ. ಕಿವಿಯಲ್ಲಿ ಬಹಳ ಕೂದಲುಗಳಿವೆ. ಈ ಕೂದಲುಗಳ ಗ್ರಹಣ ಶಕ್ತಿ ಉತ್ತಮ ಮಟ್ಟವಾಗಿದ್ದು, ಕಣ್ಣಿಗೆ ಕಾಣದಿರುವಂಥ ವಸ್ತುಗಳ ಚಲನವಲನಗಳನ್ನು ಗುರುತಿಸಲು ಸಹಾಯಕವಾಗಿವೆ. ಕಾಡುಬೆಕ್ಕು ಬೇಟೆಯಾಡುವುದು ಸಾಮಾನ್ಯವಾಗಿ ರಾತ್ರಿಯಲ್ಲಿ. ಕತ್ತಲಿನಲ್ಲಿ ಇದರ ಕಣ್ಣುಗಳು ಹೊಳೆಯುತ್ತಿರುತ್ತವೆ ಎಂದು ಪ್ರಾಣಿಪ್ರಿಯರು ವಿವರಿಸಿದ್ದಾರೆ.