ಉತ್ತರಕನ್ನಡದ ಹಲವೆಡೆ ವರುಣನ ಅಬ್ಬರ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕಾರವಾರದಲ್ಲಿ ಬುಧವಾರ ಸಂಜೆ ಭಾರೀ ಮಳೆ ಸುರಿದಿದೆ. ಎರಡು ಗಂಟೆಗಳ ಕಾಲ ಸುರಿದ ಮಳೆಗೆ ಚರಂಡಿಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದ ದೃಶ್ಯ ಕಂಡುಬಂದಿದೆ. ಸಂಜೆ ವೇಳೆ ವಾಹನಗಳಿಂದ ತುಂಬಿರುತ್ತಿದ್ದ ರಸ್ತೆಗಳು ಖಾಲಿಯಾಗಿದ್ದವು. ಗ್ರಾಮೀಣ ಭಾಗದಲ್ಲಿಯೂ ಮಳೆಯಾಗಿದ್ದು, ಕೆಂಗ್ರೆ ಹೊಳೆ, ಶಾಲ್ಮಲಾ ನದಿ ಸೇರಿದಂತೆ ಎಲ್ಲ ಹಳ್ಳಕೊಳ್ಳ ಬಹುತೇಕ ಉಕ್ಕಿ ಹರಿದವು. ಭಾಳೆ ಮಳೆ ಸುರಿದರೂ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮಳೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ವಾರದಿಂದ ಕಡಿಮೆಯಾಗಿದ್ದ ಮಳೆ ಏಕಾಏಕಿ ಸುರಿದ ಪರಿಣಾಮ ನಾಗರಿಕರು ಕಿರಿಕಿರಿ ಅನುಭವಿಸಿದರು.
ಕಾಲಿಗೆ ಗ್ಯಾಂಗ್ರೀನ್ ಆದವನಿಗೆ ಮಾಧವ ನಾಯಕ ನೆರವು
ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಅಂಕೋಲಾ ತಾಲೂಕಿನ ಕೇಣಿಯ ಮಹೇಶ ತಾಂಡೇಲ್ ಇವರಿಗೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಇಂದು ವಾಕರ್ ನೀಡಿ ನೆರವಿನ ಹಸ್ತ ಚಾಚಿದ್ದಾರೆ. ಮೀನುಗಾರಿಕೆ ಸಂದರ್ಭದಲ್ಲಿ ಇವರ ಕಾಲಿಗೆ ಗಾಯವಾಗಿದ್ದು, ಇದು ಗುಣವಾಗದೇ ಗ್ಯಾಂಗ್ರೀನ್ ಆಗಿತ್ತು. ಈ ಕಾರಣಕ್ಕಾಗಿ ಇವರ ಒಂದು ಕಾಲನ್ನು ಕತ್ತರಿಸಿ ತೆಗೆಯಲಾಗಿದೆ. ಈ ಸಂದರ್ಭದಲ್ಲಿ ರಾಮಾ ನಾಯ್ಕ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಕಾಲಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದನೆಲ್ಸನ್ ಎಂಬ ಅನಾಥ ವ್ಯಕ್ತಿಗೆ ಕೂಡ ಮಾಧವ ನಾಯಕನೆರವಾಗಿದ್ದಾರೆ. ಈ ವ್ಯಕ್ತಿ ಬಡವನಾಗಿದ್ದರೂ, ಬಿಪಿಎಲ್ ಕಾರ್ಡ್ ಹೊಂದಿರಲಿಲ್ಲ. ಹೀಗಾಗಿ 4500 ಬಿಲ್ ನೀಡಲಾಗಿತ್ತು. ಆದರೆ ಈ ವ್ಯಕ್ತಿ ಬಡವನಿದ್ದು, ಅನಾಥನಾಗಿರುವ ಬಗ್ಗೆ ಮಾಧವ ನಾಯಕ ಅವರು ಕ್ರಿಮ್ಸ್‌ನ ವೈದ್ಯರ ಗಮನಕ್ಕೆ ತಂದು ಯಾವುದೇ ಹಣ ಪಡೆಯದೇ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ದೊರಕುವಂತೆ ನೋಡಿಕೊಂಡಿದ್ದಾರಲ್ಲದೇ ಆತನಿಗೆ ಶಿರಸಿಗೆ ತೆರಳಲು ಕೂಡ ಹಣಕಾಸಿನ ಸಹಾಯ ಮಾಡಿದ್ದಾರೆ.