ಕುಮಟಾ ತಾಲೂಕಿನ ಗುರುಭವನ ಕ್ಕೆ ಮಾನ್ಯ ಶಿಕ್ಷಣ ಸಚಿವರು ಗುರುವಾರ ಶಿಲಾನ್ಯಾಸ ನೆರವೇರಿಸಿದರು. ಕುಮಟಾ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವರಾದ ಶ್ರೀ ಬಿ.ಸಿ.ನಾಗೇಶ ರವರು ಶಿಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು. ಕುಮಟಾ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಜಿಲ್ಲಾ ಸಂಘದ ವತಿಯಿಂದ ಸನ್ಮಾನ್ಯ ಸಚಿವರು ಹಾಗೂ ಮಾನ್ಯ ಶಾಸಕರಾದ ಶ್ರೀ ದಿನಕರ.ಕೆ.ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ನವೀಕೃತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವನ್ನು ಸಚಿವರು ಉದ್ಘಾಟಿಸಿ ವೀಕ್ಷಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಸಂಘದ ವತಿಯಿಂದ ಜಿಲ್ಲೆಯ ಸಮಸ್ತ ಶಿಕ್ಷಕರ ಬೇಡಿಕೆಯನ್ನೊಳಗೊಂಡ ಮನವಿ ಪತ್ರವನ್ನು ಸಚಿವರಿಗೆ ಅರ್ಪಿಸಲಾಯಿತು.

  • ವರ್ಗಾವಣಾ ಪ್ರಕ್ರಿಯೆ ಶೀಘ್ರವಾಗಿ ನಡೆಸುವುದು.
  • ಎಲ್ಲಾ ಖಾಲಿ ಹುದ್ದೆಗಳನ್ನು ತೋರಿಸುವುದು.
  • ವೈದ್ಯಕೀಯ ವೆಚ್ಚ ಮರುಪಾವತಿಗೆ ಜಿಲ್ಲೆಗೆ 3.50 ಕೋಟಿ ಮಂಜೂರು ಮಾಡುವುದು.
  • ಮಂಜೂರಾಗಿರುವ ಆಂಗ್ಲ ಮಾಧ್ಯಮ1 ಮತ್ತು 2 ನೇ ತರಗತಿಗಳಿಗೆ ಪಠ್ಯಪುಸ್ತಕ ಪೂರೈಸುವುದು.
  • 5 ವರ್ಷ ಅವಧಿ ಪೂರೈಸಿದ ಶಿಕ್ಷಣ ಸಂಯೋಜಕರು, ಬಿ.ಆರ್.ಪಿ. ಸಿ.ಆರ್.ಪಿ ಗಳಿಗೆಸಾಮಾನ್ಯ ವರ್ಗಾವಣೆ ಪೂರ್ವದಲ್ಲಿ ಕೌನ್ಸಿಲಿಂಗ್
    ಪ್ರಕ್ರಿಯೆ ನಡೆಸುವುದು.
  • 3 ವರ್ಷ ಪೂರ್ಣಗೊಳಿಸಿರುವವರಿಗೂ ಅವಕಾಶ ನೀಡುವುದು.
  • N.P.S. ಯೋಜನೆ ರದ್ದು ಮಾಡಿ O.P.S ಜಾರಿಗೊಳಿಸುವುದು.
  • ಪದವೀಧರ ಶಿಕ್ಷಕರನ್ನು 6-8 ತರಗತಿಗೆ ಪರಿಗಣಿಸುವುದು.
RELATED ARTICLES  ಶಿಕ್ಷಣ ತಜ್ಞ ವಿಚಾರವಾದಿ ಡಾ ಗುರುರಾಜ ಕರ್ಜಗಿ ಹೊನ್ನಾವರಕ್ಕೆ.

ಮನವಿ ಸ್ವೀಕರಿಸಿದ ಸನ್ಮಾನ್ಯ ಸಚಿವರು ಉತ್ತಮವಾಗಿ ಸ್ಪಂದಿಸಿ ಬೇಡಿಕೆಗಳನ್ನು ಪರಿಶೀಲಿಸಿ ಈಡೇರಿಸುವ ಭರವಸೆಯನ್ನು ನೀಡಿದರು. ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಆನಂದ ಗಾಂವಕರ್ ಹಾಗೂ ಪದಾಧಿಕಾರಿಗಳು, ಕುಮಟಾ,ಭಟ್ಕಳ ಹಾಗೂ ಹೊನ್ನಾವರ ತಾಲೂಕಾ ಸಂಘದ ಅಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳು, ಉಪಾಧ್ಯಕ್ಷರುಗಳು, ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ಸಿ.ಆರ್.ಪಿ.ನರಹರಿ ಭಟ್ಟರವರು ಧಾರ್ಮಿಕ ಕಾರ್ಯವನ್ನು ನೆರವೇರಿಸಿಕೊಟ್ಟರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ರವರ ಮಾರ್ಗದರ್ಶನದಲ್ಲಿ ಕುಮಟಾ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಭಂಡಾರಿ, ಉಪಾಧ್ಯಕ್ಷ ಕೃಷ್ಣಮೂರ್ತಿ ನಾಯಕ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.

RELATED ARTICLES  ಇಂದು ವೆಂಕ್ಟಾಪುರದಲ್ಲಿ ನಿನಾದ ದಸರಾ ಕವಿಗೋಷ್ಠಿ

ಸಂಘದ ಕುಮಟಾ ತಾಲೂಕಾ ಅಧ್ಯಕ್ಷರಾದ ಶ್ರೀ ರವೀಂದ್ರ ಭಟ್ಟ ಸೂರಿಯವರ ಸ.ಹಿ.ಪ್ರಾ.ಶಾಲೆ. ಹೊಲನಗದ್ದೆಗೆ ಭೇಟಿ ನೀಡಿದ ಶಿಕ್ಷಣ ಸಚಿವರು ಕಂಪ್ಯೂಟರ್ ಕೊಠಡಿ, ವಾಚನಾಲಯ, ವಿಜ್ಞಾನ ಪ್ರಯೋಗಾಲಯ, ಇಂಗ್ಲೀಷ್ ಮಾಧ್ಯಮ ತರಗತಿ, ಹಾಗೂ ನವೀಕೃತ ಕೊಠಡಿಗಳು ಹಾಗೂ ಶಾಲಾ ವರಾಂಡದ ಉದ್ಘಾಟನೆಯನ್ನು ನೆರವೇರಿಸಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಿರುವ ಶಿಕ್ಷಕರ ಸಾಧನೆಯನ್ನು ಪ್ರಶಂಸಿಸಿದರು.

ಉಪನಿರ್ದೇಶಕರಾದ ಹರೀಶ ಗಾಂವಕರ್, ಡಯಟ್ ಪ್ರಾಂಶುಪಾಲರಾದ ಈಶ್ವರ ನಾಯ್ಕ ಅಧಿಕಾರಿ ವರ್ಗದವರು ಹಾಗೂ ಸಿಬ್ಬಂದಿಗಳು ಉಪಸ್ತಿತರಿದ್ದರು. ಕುಮಟಾದಲ್ಲಿ ನಿರ್ಮಾಣವಾಗಲಿರುವ ಗುರುಭವನಕ್ಕೆ 10 ಲಕ್ಷ ರೂಪಾಯಿ ನೀಡುವುದಾಗಿ ಸಚಿವರು ಘೋಷಿಸಿದರು.