ಬೆಂಗಳೂರು: ಬೆಂಗಳೂರು ನಗರದಲ್ಲಿ ಯಾವುದೇ ವ್ಯಕ್ತಿ ತಪ್ಪು ಮಾಡಿದಾಗ ನನ್ನ ಹೆಸರು ಹೇಳಿದಲ್ಲಿ ಅಥವಾ ನನ್ನ ಕಚೇರಿಯಿಂದ ಪ್ರಭಾವ ಬೀರಲು ಯತ್ನಿಸಿದಲ್ಲಿ ಅಂತಹವರ ವಿರುದ್ಧ ಮೊದಲು ಪ್ರಕರಣ ದಾಖಲಿಸಿ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ಅಧಿಕಾರಿಗಳಿಗೆ ಶನಿವಾರ ಸೂಚನೆ ನೀಡಿದ್ದಾರೆ.
ವಿಕಾಸಸೌದದಲ್ಲಿ ನಿನ್ನೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿರುವ ಅವರು, ಶಿವಾಜಿನಗರ, ಕೆ.ಆರ್.ಮಾರ್ಕೆಟ್, ಕಲಾಸಿಪಾಳ್ಯ ಮತ್ತಿತರ ಕಡೆಗಳಲ್ಲಿ ಹಫ್ತಾ ವಸೂಲಿ ನಡೆಯುತ್ತಿದೆ. ಮೀಟರ್ ಬಡ್ಡಿ ದಂಧೆ ಕೂಡ ಅವ್ಯಾಹತವಾಗಿ ನಡೆಯುತ್ತಿರುವ ಮಾಹಿತಿ ಇದೆ. ನಗರದಲ್ಲಿ ಎಲ್ಲಾ ರೀತಿಯಲ್ಲೂ ಶಾಂತಿ-ಸುವ್ಯವಸ್ಥೆ ನೆಲೆಸಬೇಕು. ಇಂತಹ ಸಂದರ್ಭದಲ್ಲಿ ನನ್ನನ್ನೂ ಸೇರಿದಂತೆ ಯಾವುದೇ ಪ್ರಭಾವಿಗಳ ಹೆಸರು ಬಳಸಿಕೊಂಡು ಬರುವವರನ್ನು ಪೊಲೀಸರು ಸಹಿಸಬಾರದು ಎಂದು ಹೇಳಿದ್ದಾರೆ.
ಗೂಂಡಾಗಿರಿ ಮುಕ್ತ ಬೆಂಗಳೂರು ನಿರ್ಮಾಣಕ್ಕೆ ಗಲಾಟೆ ಮಾಡುವ ಗೂಂಡಾಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಿ ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಬೇಕು. ಅಗತ್ಯಬಿದ್ದರೆ ವೃತ್ತಿಪರ ರೌಡಿಗಳನ್ನು ರಾಜ್ಯ ಗಡಿಯಿಂದ ಹೊರಗಟ್ಟಬೇಕು. ಸಣ್ಣಪುಟ್ಟ ಗದ್ದ ನಡೆಸುವ ವ್ಯಕ್ತಿಗಳನ್ನು ಸರಿದಾರಿಗೆ ತರುವ ಕೆಲಸವನ್ನೂ ಪೊಲೀಸರು ಮಾಡಬೇಕಾಗುತ್ತದೆ. ಈ ವಿಚಾರದಲ್ಲಿ ಪೊಲೀಸರು ವಿವೇಕಯುತವಾಗಿ ನಿರ್ಧಾಕ ತೆಗೆದುಕೊಳ್ಳಬೇಕು.
ರಾತ್ರಿ ವೇಳೆಯಲ್ಲಿ ಪೊಲೀಸರು ಸರಿಯಾಗಿ ಪೊಟ್ರೊಲಿಂಗ ಪದ್ಧತಿಯನ್ನು ರೂಢಿಸಿಕೊಂಡರೆ ಬಹುತೇಕ ದುರ್ಘಟನೆಗಳನ್ನು ತಪ್ಪಿಸಬಹುದು. ಪೊಲೀಸರು ಕಣ್ಣಿಗೆ ಕಾಣಿಸುತ್ತಿದ್ದರೆ, ದುಷ್ಟಶಕ್ತಿಗಳು ಯಾವುದೇ ಅಪರಾಧ ಚಟುವಟಿಕೆ ನಡೆಸುವುದಿಲ್ಲ. ಪೊಲೀಸರು ಬೇರೆ ದೇಶದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತ ಕಾನೂನು ಉಲ್ಲಂಘೆ ಮಾಡುತ್ತಿದ್ದು, ಅವುಗಳನ್ನು ತಡೆಯುವುದು ಹಾಗೂ ದೇಶಿ ಪ್ರವಾಸಿಗರ ಭದ್ರತೆಯ ಬಗ್ಗೆ ಗಮನ ಹರಿಸುವುದು ಬಹುಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಪೇಯಿಗ್ ಗೆಸ್ಟ್ ಗಳ ಪೈಕಿ ಹಲವು ಪಿಜೆಗಳು ತಡರಾತಿರವರೆಗೂ ತೆರೆದಿರುತ್ತವೆ. ಕಾನೂನುಬಾಹಿರ ಚಟುವಟಿಕಗಳನ್ನು ನಡೆಸುವ ಪಿಜಿಗಳ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು. ಡ್ಯಾನ್ಸ್ ಬಾರ್, ವೇಶ್ಯವಾಟಿಕೆ, ವಿಡಿಯೋ ಗೇಮ್, ಸ್ಕಿಲ್ ಗೇಮ್, ಲೈವ್ ಬ್ಯಾಂಡ್ ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಆಯಾ ಠಾಣಾ ವ್ಯಾಪ್ತಿಯ ಅಧಿಕಾರಿಗಳು ನೋಡಿಕೊಳ್ಳಬೇಕು.
ನಗರದ ಎಲ್ಲಾ ಕಡೆಗಳಲ್ಲೂ ಆಟೋ ನಿಲ್ದಾಣಗಳನ್ನು ಮಾಡಿಕೊಡುವುದಿರಂದ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ. ರಾಜಧಾನಿಯಲ್ಲಿ ಭಿಕ್ಷಾಟನೆ ವೃತ್ತಿ ಅವ್ಯಾಹತವಾಗಿ ನಡೆಯುತ್ತಿದ್ದು, ಮಕ್ಕಳು ಹಾಗೂ ಮಹಿಳೆಯರನ್ನು ಬಳಸಿ ಇಂತಹ ಕೆಲಸ ಮಾಡುವ ವ್ಯವಸ್ಥಿತ ಜಾಲಗಳಿವೆ. ಕೂಡಲೇ ಇದಕ್ಕೆ ತಡೆ ಹಾಕಬೇಕು. ಸರಿಯಾದ ರೀತಿಯಲ್ಲಿ ತಮ್ಮ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ವರ್ಗಾವಣೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ತಮ್ಮ ಕಾರ್ಯಕ್ಷಮತೆಯಲ್ಲಿ ತೃಪ್ತಿ ತರದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.