ಕುಮಟಾ : ತಾಲೂಕಿನ ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕುರಿಗದ್ದೆಯ ಮನೆಯೊಂದರ ಬಳಿ ಚಿರತೆ ಬಂದು ನಿವಾಸಿಗಳಲ್ಲಿ ನಡುಕ ಹುಟ್ಟಿಸಿ ಪರಾರಿಯಾಗಿರುವ ಘಟನೆ ವರದಿಯಾಗಿದ್ದು, ಬರ್ಗಿ ಭಾಗದಲ್ಲಿ ಪದೇ ಪದೇ ಚಿರತೆ ಕಣಿಸಿಕೊಳ್ಳುತ್ತಿರುವುದರಿಂದ ಅಲ್ಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಬರ್ಗಿಯ ಕುರಿಗದ್ದೆಯ ನಾರಾಯಣ ನಾಯ್ಕ ಅವರ ಮನೆಯ ಹಿಂಬಾಗಿಲ ಬಳಿ ಚಿರತೆಯೊಂದು ಆಗಮಿಸಿತ್ತು. ಆಹಾರ ಹುಡುಕುತ್ತ ಕಾಡಿನಿಂದ ನಾಡಿಗೆ ಬಂದ ಚಿರತೆ ರಾತ್ರಿ 9.30ರ ಸುಮಾರಿಗೆ ನಾರಾಯಣ ನಾಯ್ಕರ ಮನೆಯ ಹಿಂಭಾಗದಲ್ಲಿ ಕಾಣಿಸಿಕೊಂಡಿತು. ಮನೆಯ ಹಿಂಭಾಗದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಚಿರತೆ ಸಲೀಸಾಗಿ ಹಿಂಬಾಗಿಲಲ್ಲಿ ಬಂದು ನಿಂತಿತ್ತು. ಇದನ್ನು ನೋಡಿ ಮನೆಯವರು ಕಿರುಚಾಡಿದರು. ಕುಟುಂಬಸ್ಥರೆಲ್ಲ ಸೇರುವಷ್ಟರಲ್ಲಿ ಚಿರತೆ ಅಲ್ಲಿಂದ ಪರಾರಿಯಾಗಿದೆ ಎನ್ನಲಾಗಿದೆ. ಬಾಗಿಲ ಬಳಿಯೇ ಮಗುವೊಂದು ಆಟವಾಡುತ್ತಿದ್ದು ನಾವು ಕಂಡು ಕೂಗದಿದ್ದರೆ ಚಿರತೆ ಮಗುವನ್ನು ಹೊತ್ತುಕೊಂಡು ಹೋಗುವ ಸಾಧ್ಯತೆ ಇತ್ತು ಎಂದು ಕುಟುಂಬಸ್ಥರು ತಮ್ಮ ಆತಂಕ ಹೇಳಿಕೊಂಡಿದ್ದಾರೆ.
ಕಳೆದ ತಿಂಗಳು ಇದೇ ಭಾಗದಲ್ಲಿ ಚಿರತೆಯೊಂದು ನಾಯಿಯ ಬೋನಿನಲ್ಲಿ ಸಿಕ್ಕಿಬಿದ್ದಿತ್ತು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಆರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಪ್ರದೀಪ ನಾಯ್ಕ ಅವರ ತಂಡ ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಬೋನ್ ಇಟ್ಟಿದ್ದಾರೆ. ಅಲ್ಲದೇ ಆತಂಕಕಾರಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.