ಕುಮಟಾ: ತಾಲೂಕಿನ ಪ್ರಸಿದ್ಧ ವೈದ್ಯ ಡಾ. ಅಶೋಕ ಕೃಷ್ಣ ಭಟ್ಟ ಹಳಕಾರ ಅವರಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಡಾ.ಅಶೋಕ ಭಟ್ಟ ಹಳಕಾರ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಅದೆಷ್ಟೋ ಜೀವವನ್ನು ಉಳಿಸಿದ್ದಾರೆ. ೧೯೭೮ನೇ ಇಸವಿಯಿಂದ ಇಂದಿನ ವರೆಗೂ ನಿಸ್ವಾರ್ಥ ಸೇವೆ ಮಾಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಾ.ಅಶೋಕ ಭಟ್ಟ ಅವರ ತಂದೆ ಕೃಷ್ಣ ಭಟ್ಟ ಅವರು ಕೂಡ ಖ್ಯಾತ ವೈದ್ಯರಾಗಿ ಗುರುತಿಸಿಕೊಂಡಿದ್ದರು.
ತಂದೆಯ ಹಾದಿಯಲ್ಲೆ ನಡೆದ ಹಳಕಾರ ಡಾಕ್ಟರ್ ಅವರು ಕೇವಲ ತಮ್ಮ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮಾತ್ರ ಸಿಮೀತಗೊಳಿಸದೇ, ರೋಟರಿ ಕ್ಲಬ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್, ಭಾರತ ಸೇವಕ ಸಮಾಜ ಸೇರಿದಂತೆ ಮತ್ತಿತರರ ಸಂಸ್ಥೆಗಳ ಅಡಿಯಲ್ಲಿ ನಿರಾಶ್ರಿತರು, ಬಡವರು ಹಾಗೂ ಅಶಕ್ತರಿಗೆ ತಮ್ಮ ಅನುಪಮ ಸೇವೆ ನೀಡಿದ್ದಾರೆ.
ದೊಡ್ಡ ಖಾಯಿಲೆಯಿಂದ ಗುಣಮುಖರಾಗದೇ ಇದ್ದವರು ಇವರ ಬಳಿ ಹೋಗಿ ಬಂದರೆ ರೋಗದಿಂದ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇಂದಿನ ದಿನದಲ್ಲಿಯೂ ಇದೆ. ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರವಿಲ್ಲದ ಸಮಯದಲ್ಲಿ ದೂರದ ಹಳ್ಳಿಗಳಿಗೆ ಸೈಕಲ್ ಮೇಲೆ ತೆರಳಿ, ಸಮುದ್ರದಲ್ಲಿ ದೋಣಿಯ ಮೂಲಕ ರೋಗಿಗಳ ಬಳಿ ತಲುಪಿ, ಜೌಷಧೋಪಚಾರ ಮಾಡಿ ಬಡ ಜೀವಗಳಿಗೆ ಜೀವದಾನ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಲ್ಲದೇ, ಡಾ.ಹಳಕಾರ ಚೆರಿಟೇಬಲ್ ಟ್ರಸ್ಟ್ ಮೂಲಕ ಮೆಡಿಕಲ್ ಕ್ಯಾಂಪ್, ಕಣ್ಣಿನ ಶಸ್ತç ಶಿಕಿತ್ಸಾ ಶಿಬಿರ, ಥೈರಾಯ್ಡ್ ಕ್ಯಾಂಪ್, ಮೂಲೆ ಸಾಂದ್ರತೆ ಪರೀಕ್ಷೆ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಮತ್ತು ಜೌಷಧಿ ವಿತರಣೆ, ರಕ್ತದಾನ ಶಿಬಿರಗಳ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ಇಂದಿಗೂ ಕೈಗೊಳ್ಳುತ್ತ ಬಂದಿದ್ದಾರೆ.
ಕೊರೊನಾದಂತಹ ಸಂಕಷ್ಟ ಕಾಲದಲ್ಲೂ ಸೋಂಕಿನ ಕುರಿತು ಅರಿವು ನೀಡಿ, ಅದೆಷ್ಟೋ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬಿದ್ದಾರೆ. ಅವರ ಬಳಿ ಕಷ್ಟ ಎಂದು ಹೇಳಿಕೊಂಡು ಹೋದವರಿಗೆ ಬರಿಗೈಯಲ್ಲಿಕಳುಹಿಸಿಲ್ಲ. ಅವರ ಸಮಾಜ ಸೇವೆಯನ್ನು ಪರಿಗಣಿಸಿ, ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬೇಕೆಂದು ಅವರ ಅಭಿಮಾನಿಗಳು ಹಾಗೂ ಕುಮಟಾ ತಾಲೂಕಿನ ವಿವಿಧ ಕ್ಷೇತ್ರದ ಗಣ್ಯರು ಆಗ್ರಹಿಸಿದ್ದಾರೆ.