ಕಾರವಾರ: ಉತ್ತರ ಕನ್ನಡದಲ್ಲಿ ಯುವತಿಯರು ನಾಪತ್ತೆಯಾಗುತ್ತಿರುವ ಹಾಗೂ ಮಾಹಿತಿ ನೀಡದೆ ಕಣ್ಮರೆಯಾಗುತ್ತಿರುವ ಪ್ರಕರಣಗಳು ಮತ್ತೆ ಮತ್ತೆ ಪತ್ತೆಯಾಗುತ್ತಿದೆ.ವಿವಾಹ ನಿಶ್ಚಿತಾರ್ಥವಾಗಿದ್ದ ಕಾರವಾರದ ಯುವತಿ ನಾಪತ್ತೆಯಾಗಿರುವ ಬಗ್ಗೆ ಇದೀಗ ಪ್ರಕರಣವೊಂದು ವರದಿಯಾಗಿದೆ.
ಮಂಗಳೂರು ನಗರದಲ್ಲಿ ಗಾರ್ಮೆಂಟ್ಸ್ ಕೆಲಸ ಮಾಡಿಕೊಂಡಿದ್ದ, ಕಾರವಾರ ಮೂಲದ ಅಂಜಲಿ ಆನಂದು ಕೊಠರಕರ (24) ನಾಪತ್ತೆಯಾದ ಯುವತಿ ಎನ್ನಲಾಗಿದೆ.
ಯುವತಿಗೆ ಮದುವೆ ನಿಶ್ಚಯವಾಗಿದ್ದು, ತಿಂಗಳ ಹಿಂದೆ ಕಾರವಾರದ ಮನೆಯಲ್ಲಿ 15 ದಿನಗಳವರೆಗೆ ಇದ್ದು, ಮಂಗಳೂರಿಗೆ ಕೆಲಸಕ್ಕೆ ವಾಪಸಾಗಿದ್ದಳು. ಸಂಬಳದ ಹಣ ತೆಗೆದುಕೊಂಡು ಮನೆಗೆ ಬರುವುದಾಗಿ ಪೋನ್ ಮೂಲಕ ತಿಳಿಸಿದ್ದರೂ, ಇನ್ನೂ ಬಂದಿಲ್ಲ. ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಗಾರ್ಮೆಂಟ್ಸ್ ನಲ್ಲಿ ವಿಚಾರಿಸಿದಾಗ ಅಕ್ಟೋಬರ್ 3ರಂದು ಊರಿಗೆ ಹೋಗುವುದಾಗಿ ಹೇಳಿದ್ದಾಳೆ. ಆದರೆ ಊರಿಗೂ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾಗಿ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸ್ ತನಿಖೆ ನಂತರದಲ್ಲಿ ಏನೆಲ್ಲ ಘಟನಾವಳಿಗಳು ನಡೆದಿತ್ತು ಎಂಬುದರ ಸತ್ಯಾಸತ್ಯತೆ ಹೊರ ಬರಲಿದೆ.