ಯಲ್ಲಾಪುರ : ಯುವಕರಿಬ್ಬರು ರಿಕ್ಷಾ ಚಾಲಕರೊಬ್ಬರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಆಟೋ ರಿಕ್ಷಾ ಚಾಲಕ,
ಮಾಲೀಕರು ಯಲ್ಲಾಪುರ ತಾಲೂಕಿನಾದ್ಯಂತ ಆಟೋ ರಿಕ್ಷಾ ಓಡಾಟ ಬಂದ್ ಮಾಡಿದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.
ತಾಲೂಕಿನಲ್ಲಿ ಬುಧವಾರ ಆಟೋಗಳ ಓಡಾಟ ಸಂಪೂರ್ಣ ಸ್ತಬ್ಧಗೊಂಡಿದೆ. ಹಬ್ಬದ ಸಂದರ್ಭದಲ್ಲಿ ಓಡಾಟಕ್ಕೆ ಆಟೋ ಇಲ್ಲದೇ ಸಾರ್ವಜನಿಕರು ಪರದಾಡುವಂತಾಗಿದೆ. ನವರಾತ್ರಿ ನಿಮಿತ್ತ ಯಲ್ಲಾಪುರ ತಾಲೂಕಿನ ಬಸ್ ನಿಲ್ದಾಣದ ಬಳಿಯ ಆಟೋ ರಿಕ್ಷಾ ನಿಲ್ದಾಣದ ಹಿಂಬದಿಯಲ್ಲಿರುವ ಚೌಡಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯುತ್ತಿತ್ತು. ಈ ವೇಳೆ ಆಟೋ ರಿಕ್ಷಾಗಳನ್ನು ಕೂಡ ಪೂಜೆಗೆ ಇಡಲಾಗಿತ್ತು. ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಮುಖಂಡರ ಪುತ್ರ ಹಾಗೂ ಇನ್ನೋರ್ವ ಯುವಕ ಬೈಕಿನಲ್ಲಿ ಬಂದು, ಪೂಜೆ ನಡೆಯುತ್ತಿದ್ದ ಸ್ಥಳದ ಬಳಿ ಬೈಕ್
ನಿಲ್ಲಿಸಿದ್ದಾರೆ.
ಈ ವೇಳೆ ಸುಮಾರು 48 ವರ್ಷ ವಯಸ್ಸಿನ ರಿಕ್ಷಾ ಚಾಲಕ ದೀಪಕ್ ಮೇಸ್ತಾ ಎನ್ನುವವರು, ರಿಕ್ಷಾಗಳಿಗೆ ಪೂಜೆ ನಡೆಯುತ್ತಿದೆ. ಬೈಕ್ ಅನ್ನು ಪಕ್ಕದಲ್ಲಿ ನಿಲ್ಲಿಸಿ ಎಂದು ಕೇಳಿಕೊಂಡಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಯುವಕರು, ರಿಕ್ಷಾ ಚಾಲಕರ ವಯಸ್ಸನ್ನೂ ನೋಡದೇ ಕೆನ್ನೆಗೆ ಹೊಡೆದಿದ್ದಾರೆಂದು ಆರೋಪಿಸಲಾಗಿದೆ.
ಪುಂಡರ ಹಾವಳಿ ಮಿತಿ ಮೀರುತ್ತಿರುವುದರಿಂದ ಅನಿವಾರ್ಯವಾಗಿ ಇಂದು ಆಟೋ ರಿಕ್ಷಾಗಳನ್ನು ರಸ್ತೆಗಿಳಿಸದೆ ಪ್ರತಿಭಟಿಸುತ್ತಿದ್ದೇವೆ ಎಂದು ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷ ಸಂತೋಷ್ ನಾಯ್ಕ ತಿಳಿಸಿದ್ದಾರೆ. ಪದೇ ಪದೇ ಈ ತರಹದ ಘಟನೆಗಳು ಮರುಕಳಿಸುತ್ತಿದ್ದು ಆಟೋ ಚಾಲಕರು ಹಾಗೂ ಮಾಲಕರಿಗೆ ರಕ್ಷಣೆ ಇಲ್ಲದಂತಾಗಿದೆ.
ಆಟೋರಿಕ್ಷಾ ಓಡಿಸಿ ಜೀವನ ನಡೆಸುತ್ತಿರುವ ನಮಗೆ ಈ ರೀತಿಯ ತೊಂದರೆ ಎದುರಾಗಿದೆ. ಇದನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಟೋ ಚಾಲಕರು ಮಾಹಿತಿ ನೀಡಿದ್ದಾರೆ. ಆಟೋ ಚಾಲಕರ ದಿಢೀರ್ ನಿರ್ಣಯದಿಂದ ಸಾರ್ವಜನಿಕರೂ ತೊಂದರೆ ಅನುಭವಿಸುವಂತಾಯಿತು.