ಕುಮಟಾ: ರಸ್ತೆ ಪಕ್ಕದಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಿ ಹಾಗೆಯೇ ಬಿಟ್ಟಿದ್ದರು. ನಂತರ ಸಾರ್ವಜನಿಕರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಕಾಮಗಾರಿ ಆರಂಭಿಸಿ, ಸುಮಾರು ೧ ಕಿ.ಮೀ ರಸ್ತೆ ಅಗಲೀಕರಣ ನಡೆಸಿ, ಅರ್ಧಂಬರ್ಧ ಕಾಮಗಾರಿ ನಡೆಸಿದ್ದರು. ಇದರಿಂದ ವಾಹನ ಸವಾರರು ಮತ್ತಷ್ಟು ತೊಂದರೆ ಅನುಭವಿಸುವಂತಾಗಿತ್ತು ಆದರೆ ಇದೀಗ ಎರಡು ವರ್ಷಗಳಿಂದ ಕುಂಟುತ್ತಿರುವ ಮೂರೂರು ರಸ್ತೆ ಅಭಿವೃದ್ಧಿ ಕಾಮಗಾರಿ ಕೆಲವು ದಿನಗಳಿಂದ ಪುನಃ ಆರಂಭವಾಗಿದ್ದು, ಒಟ್ಟಾರೆ ಮೂರನೇ ವರ್ಷಕ್ಕೆ ಕಾಲಿಟ್ಟಾಂತಾಗಿದೆ. ಈ ಬಾರಿಯಾದರೂ ಗುತ್ತಿಗೆದಾರ ಸಂಪೂರ್ಣ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.

ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಈ ಭಾಗದ ನಿವಾಸಿಗಳು ರಸ್ತೆ ವಿಷಯ ಪ್ರಸ್ತಾಪಿಸಿದಾಗ, ಲೊಕೋಪಯೋಗಿ ಇಲಾಖೆಯ ಎಂಜಿನಿಯರ್ ಶಶಿಕಾಂತ ಕೋಳೆಕರ ಉತ್ತರಿಸಿ, ಭಟ್ಕಳ ಮೂಲದ ಗುತ್ತಿಗೆದಾರರಿಗೆ ಮೂರು ಕಾಮಗಾರಿಗಳ ಟೆಂಡರ್ ಆಗಿದ್ದು, ಉಳಿದ ೨ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿದ್ದಾರೆ. ತಾಂತ್ರಿಕ ತೊಂದರೆಗಳಿಂದ ರಸ್ತೆ ಸುಧಾರಣೆಗೆ ಅಡ್ಡಿಯಾಗಿತ್ತು. ಇಲಾಖೆಯಿಂದ ನೋಟಿಸ್ ನೀಡಿದ ನಂತರ ಕಾಮಗಾರಿ ಆರಂಭಿಸಿದ್ದರು. ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗುತ್ತದೆ ಎಂದು ಸಭೆಯಲ್ಲಿ ತಿಳಿಸಿದ್ದರು.

RELATED ARTICLES  ಜು.‌ 20 ರಂದು ವಿಕ್ರಮಾದಿತ್ಯ ವೀಕ್ಷಣೆಗೆ ಅವಕಾಶ

ಕಳೆದ ವರ್ಷ ವಿರೋಧ ಪಕ್ಷದವರು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ, ಅವೈಜ್ಞಾನಿಕ ಕಾಮಗಾರಿ ನಡೆಸಿದ್ದರ ವಿರುದ್ಧ ಇಲಾಖೆಗೆ ದೂರು ನೀಡಿದ್ದರು. ಅರ್ಧಂಬರ್ಧ ಕಾಮಗಾರಿ ನಡೆಸಿ, ಕಾಲ್ಕಿತ್ತ ಗುತ್ತಿಗೆದಾರರನಿಗೆ ನೋಟಿಸ್ ನೀಡಿ, ಕಪ್ಪುಪಟ್ಟಿಗೆ ಸೇರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಪತ್ರವನ್ನೂ ಬರೆದಿದ್ದರು. ನಂತರ ಲೋಕೊಪಯೋಗಿ ಇಲಾಖೆಯ ಇಂಜೀನಿಯರ್ ಗುತ್ತಿಗೆದಾರರನ್ನು ಕರೆದು ಆದಷ್ಟು ಶೀಘ್ರವಾಗಿ ರಸ್ತೆ ಮುಗಿಸುವಂತೆ ತಾಕೀತು ಮಾಡಿದ್ದರು. ರಸ್ತೆ ಅಗೆದು ಹಾಗೆಯೇ ಬಿಟ್ಟು ಹೋದ್ದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದರು. ಇದರಿಂದ ಸಿಟ್ಟಾದ ಈ ಭಾಗದ ನಿವಾಸಿಗಳು ಪ್ರತಿಭಟನೆಯನ್ನು ನಡೆಸಿದ್ದರು.

RELATED ARTICLES  ಕೊಂಕಣದ ಸಿ.ವಿ.ಎಸ್.ಕೆ. ಪ್ರೌಢಶಾಲೆಯಿಂದ ಶೇ. 100 ಫಲಿತಾಂಶ

ಮೂರೂರು ಗುಡ್ಡದ ಮೇಲೆ ರೋಲರ್, ಜೆ.ಸಿ.ಬಿ ಹಿಟಾಚಿಗಳನ್ನು ನಿಲ್ಲಿಸಿಟ್ಟು ಒಂದು ವರ್ಷ ಕಳೆದರೂ ಗುತ್ತಿಗೆದಾರ ಮಾತ್ರ ರಸ್ತೆ ಕಾಮಗಾರಿ ನಡೆಸುವ ಬಗ್ಗೆ ಯೋಚನೆ ಮಾಡಿಲ್ಲ. ವಾಹನಗಳು ಅಲ್ಲಿಯೇ ತುಕ್ಕು ಹಿಡಿದು ಬಿದ್ದಿದ್ದವು. ಗುತ್ತಿಗೆದಾರರನ್ನು ಬದಲಾಯಿಸಿ, ಬೇರೆಯವರಿಗೆ ಕಾಮಗಾರಿ ನೀಡಿ, ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸುವ ಬಗ್ಗೆಯೂ ಸಾರ್ವಜನಿಕರು ಪಿಡಬ್ಲ್ಯೂ ಇಲಾಖೆಯನ್ನು ಒತ್ತಾಯಿಸಿದ್ದರು. ಅಂತೂ ಈಗ ಮತ್ತೆ ರಸ್ತೆ ಅಭಿವೃದ್ಧಿ ಕಾಮಗಾರಿ ವೇಗದಲ್ಲಿ ನಡೆಯುತ್ತಿದ್ದು, ಜನರ ನಿರೀಕ್ಷೆ ಮತ್ತೆ ಮೊಳಕೆಯೊಡೆದಿದೆ.