ಕಾರವಾರ : ಕುಡಿತದ ಅಮಲು ಅದೆಂತಹ ಪರಿಸ್ಥಿತಿ ತಂದೊಡ್ಡುತ್ತದೆ ಎಂಬುದನ್ನೂ ಊಹಿಸುವುದು ಕಷ್ಟ. ಅದೆಷ್ಟೋ ಕುಟುಂಬಗಳು ಇದರಿಂದಾಗಿಯೇ ಬೀದಿಗೆ ಬಂದಿರುವ ಹಾಗೂ ಅದೆಷ್ಟು ಜನ ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿದೆ. ಅಂತಹುದೇ ಒಂದು ಘಟನೆ ಸಿದ್ದಾಪುರದಲ್ಲಿ ವರದಿಯಾಗಿದೆ.
ಕುಡಿದ ಅಮಲಿನಲ್ಲಿ ಶುಲ್ಲಕ ವಿಷಯಕ್ಕೆ ತಾಯಿ ಹಾಗೂ ಅಕ್ಕನ ಮೇಲೆ ಗುಂಡು ಹಾಕಿಸಿದ ಘಟನೆ ತಾಲೂಕಿನ ಕುಡಗುಂದದಲ್ಲಿ ನಡೆದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗುಂಡು ತಗುಲಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಕೊಲೆಯ ಆರೋಪಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ.
ಆತನ ತಾಯಿ ಪಾರ್ವತಿ ಹಾಗೂ ಅಕ್ಕ ರಮ್ಯಾ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ತಂದೆ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ, ಊಟದ ವಿಷಯದಲ್ಲಿ ಗಲಾಟೆ ತೆಗೆದಿದ್ದ ಮಂಜುನಾಥ್ ಮನೆಯಲ್ಲಿದ್ದ ನಾಡ ಬಂದೂಕನ್ನು ತೆಗೆದುಕೊಂಡು ತಾಯಿ ಹಾಗೂ ಅಕ್ಕನಿಗೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಇಬ್ಬರೂ ಸ್ಥಳದಲ್ಲೇ ಸಾವು ಕಂಡಿದ್ದಾಗಿ ತಿಳಿದುಬಂದಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.