ಕುಮಟಾ: ಸದಾ ಒಂದಿಲ್ಲೊಂದು ಕಾರಣದಿಂದ ಐ.ಆರ್.ಬಿ ಯವರ ಕೆಲಸ ಸುದ್ದಿಯಾಗುತ್ತಿದೆ. ತಾಲ್ಲೂಕಿನ ಕೈರೆ ಬಳಿ ಗುಡ್ಡ ಕುಸಿತದ ಮಣ್ಣು ರಸ್ತೆ ಮೇಲೆ ಬಿದ್ದು ಒಂದೂವರೆ ವರ್ಷವಾದರೂ ಐ.ಆರ್.ಬಿ ಯವರು ತೆರವುಗೊಳಿಸದ ಬಗ್ಗೆ ಪ್ರಯಾಣಿಕರು ಕಿಡಿ ಕಾರುತ್ತಿರುವ ಬಗ್ಗೆ ವರದಿಯಾಗಿದೆ.

ಅಂಕೋಲಾ-ಕುಮಟಾ ರಾಷ್ಟ್ರೀಯ ಹೆದ್ದಾರಿಯಿಂದ ಬರಗದ್ದೆ ಮೂಲಕ ಸಾಗಿ ಕುಮಟಾ-ಶಿರಸಿ ಹೆದ್ದಾರಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಯಲ್ಲಿ ಮಣ್ಣು ಬಿದ್ದಿದ್ದು, ವರ್ಷಗಳೇ ಕಳೆದಿದೆ. ಶಿರಸಿ ಭಾಗದಿಂದ ಗೋಕರ್ಣ, ಕಾರವಾರ ಮುಂತಾದ ಕಡೆ ತೆರಳುವ ಬಸ್ ಗಳು ಸೇರಿದಂತೆ ನೂರಾರು ವಾಹನಗಳು ಪ್ರತಿನಿತ್ಯ ಸಂಚರಿಸುವ ರಸ್ತೆ ಇದಾಗಿದ್ದು, ಈ ಮಣ್ಣು ಬಿದ್ದು ವರ್ಷಗಳೇ ಕಳೆದಿರುವ ಕಾರಣ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES  ಹಂದಿಗೋಣ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಒಂದೂವರೆ ವರ್ಷದ ಹಿಂದೆ ಜೋರು ಮಳೆಯಲ್ಲಿ ಈ ಭಾಗದ ಗುಡ್ಡ ಕುಸಿದು ರಸ್ತೆ ಮೇಲೆ ಮಣ್ಣಿನ ರಾಶಿಯೇ ತುಂಬಿತ್ತು. ಮತ್ತಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದ್ದ ಕಾರಣ ಕೆಲವು ಕಾಲ ಇಲ್ಲಿ ದ್ವಿಚಕ್ರ ವಾಹನಗಳ ಹೊರತಾಗಿ ಬೇರೆ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಎಲ್ಲಾ ವಾಹನಗಳ ಸಂಚಾರ ಶುರುವಾಗಿ ಹಲವು ತಿಂಗಳೇ ಕಳೆದರೂ ಐ.ಆರ್.ಬಿ ಮಾತ್ರ ಇಲ್ಲಿನ ಮಣ್ಣು ತೆರವಿಗೆ ಆಸಕ್ತಿ ತೋರಿಲ್ಲ. ಸ್ಥಳೀಯರೇ ಸ್ವಲ್ಪ ಜಾಗ ಮಾಡಿಕೊಂಡು ವಾಹನ ಕೊಂಡೊಯ್ಯುತ್ತಿದ್ದಾರೆ.

RELATED ARTICLES  ಮಾ. 27 ರಂದು "ರಂಗಸಾರಸ್ವತ" ಉದ್ಘಾಟನೆ.

ಲಾಕ್ ಡೌನ್ ಮುಗಿದ ಬಳಿಕ ಈ ಮಾರ್ಗದಲ್ಲಿ ವಾಹನಗಳ ಓಡಾಟ ಜಾಸ್ತಿಯಾಗಿದ್ದು, ಕಠಿಣ ತಿರುವಿನಲ್ಲೇ ಮಣ್ಣಿನ ರಾಶಿ ಬಿದ್ದಿರುವ ಕಾರಣ ಸವಾರರು ಉಪದ್ರವ ಎದುರಿಸುವಂತಾಗಿದೆ. ರಸ್ತೆ ಕೂಡ ಸಂಪೂರ್ಣ ಹಾಳಾಗಲು ಇದು ಸಹಕಾರಿ ಎಂಬಂತಿದೆ.

ಐ.ಆರ್.ಬಿಯವರು ಚತುಷ್ಪಥ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ದಿನದಿಂದ ಒಂದಿಲ್ಲೊಂದು ಎಡವಟ್ಟು ಮಾಡುತ್ತಲೇ ಬಂದಿದ್ದಾರೆ. ಕರ್ತವ್ಯ ಪ್ರಜ್ಞೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಕಾರವಾರ- ಶಿರಸಿ ಸಂಪರ್ಕ ರಸ್ತೆಯಲ್ಲಿ ತುಂಬಿದ ಮಣ್ಣನ್ನು ಶೀಘ್ರವೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮಾಜಿ ಜಿ.ಪಂ ಸದಸ್ಯ ಗಜಾನನ ಪೈ ಒತ್ತಾಯಿಸಿದ್ದಾರೆ.