ನವರಾತ್ರಿ ಹಬ್ಬದ ಪ್ರಯುಕ್ತ ಶಿರಸಿಯ ಅದ್ವೈತ ಸ್ಕೇಟರ್ಸ & ಸ್ಪೋರ್ಟ್ಸ್ ಕ್ಲಬ್, ತನ್ನ ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಹಾಗೂ ಪಾಲಕ ಪೋಷಕರಿಗಾಗಿ ದಾಂಡಿಯಾ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಶಿರಸಿ ನಗರದ ಕೆಲವೇ ಕೆಲವು ಸ್ಥಳಗಳಲ್ಲಿ ಅದರಲ್ಲೂ ವಿಶೇಷವಾಗಿ ಗುಜರಾತಿ ಸಮಾಜದ ಬಂಧುಗಳು ಈ ದಾಂಡಿಯಾ ಕಾರ್ಯಕ್ರಮಗಳನ್ನು ಅನೇಕ ವರ್ಷಗಳಿಂದ ಆಚರಿಸುತ್ತಿದ್ದಾರೆ.
ಹಾಗೆಯೇ ಕಳೆದ ಎರಡು ವರ್ಷಗಳಿಂದ ಶಿರಸಿಯ ಅದ್ವೈತ ಸ್ಕೇಟಿಂಗ್ ಕ್ಲಬ್ ಈ ವಿಶೇಷವಾದ ದಾಂಡಿಯಾ ಕಾರ್ಯಕ್ರಮವನ್ನು ತನ್ನ ಕ್ಲಬಿನ ಸ್ಕೇಟಿಂಗ್ ಕ್ರೀಡಾಪಟುಗಳಿಗಾಗಿ ವಿಶಾಲವಾದ ತನ್ನ ಅದ್ವೈತ ಸ್ಕೇಟಿಂಗ್ ರಿಂಕಿನಲ್ಲಿ ಆಯೋಜಿಸುತ್ತಿದೆ.
ಅದ್ವೈತ ಸ್ಕೇಟಿಂಗ್ ರಿಂಕಿನಲ್ಲಿ ಕ್ಲಬಿನ ನಿರ್ದೇಶಕಿ ಶ್ರೀಮತಿ ಸುಲಕ್ಷಣಾ ಕುಡಾಳಕರ, ದುರ್ಗಾ ದೇವಿಗೆ ಪೂಜೆಯನ್ನು ಸಲ್ಲಿಸಿ ದಾಂಡಿಯಾ ನೃತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ಕೇಟಿಂಗ್ ಕ್ರೀಡಾಪಟುಗಳು ಕಾಲಿಗೆ ಸ್ಕೇಟಿಂಗ್ ಕಟ್ಟಿಕೊಂಡು ಮಾಡಿದ ದಾಂಡಿಯಾ ಕೋಲಾಟದ ನೃತ್ಯವು ನೋಡುಗರಲ್ಲಿ ನಿಬ್ಬೆರಗಾಗುವಂತೆ ಮಾಡಿತ್ತು.
ಮೊದಲಿಗೆ ಸ್ವಾಗತ ದಾಂಡಿಯಾ ನೃತ್ಯವನ್ನು ಅದ್ವೈತ ಸ್ಕೇಟಿಂಗ್ ಕ್ಲಬಿನ ಟ್ರಾಕ್ ಟೀಮ್ ಸದಸ್ಯರು ಮಾಡಿದರು.
ಸುಮಾರು ಎರಡು ತಾಸುಗಳವರೆಗೆ ನಡೆದ ದಾಂಡಿಯಾ ಕಾರ್ಯಕ್ರಮದಲ್ಲಿ ಶಿರಸಿ ನಗರ ಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸದಸ್ಯರಾದ ಆನಂದ ಸಾಲೇರ, ಕ್ಲಬಿನ ವಿಶ್ವನಾಥ ಕುಡಾಳಕರ,ಎಲ್ಲಾ ಸ್ಕೇಟಿಂಗ್ ಕ್ರೀಡಾಪಟುಗಳು, ಪಾಲಕ ಪೋಷಕರು, ಹಾಗೂ ಇನ್ನಿತರೇ ಪ್ರಮುಖರು ದಾಂಡಿಯಾ ನೃತ್ಯಕ್ಕೆ ಹೆಜ್ಜೆಯನ್ನು ಹಾಕಿದರು.
ಈ ಕಾರ್ಯಕ್ರಮಕ್ಕೆ ವೈಭವಪೂರ್ಣ ಬೆಳಕು ಹಾಗೂ ಧ್ವನಿಯ ಸಹಕಾರವನ್ನು ಪಯಣ ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಸಂಸ್ಥೆ ಶಿರಸಿ ನೀಡಿತ್ತು.
ಮುಂದಿನ ದಸರೆಯ ಸಂದರ್ಭದಲ್ಲಿ ಶಿರಸಿಯ ಪ್ರಮುಖ ಮಹಿಳಾ ಸಂಘ ಹಾಗೂ ಆಸಕ್ತ ಸಂಘ ಸಂಸ್ಥೆಗಳಿಗೆ ಈ ಪಾರಂಪಾರಿಕ ದಾಂಡಿಯಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ಅದ್ವೈತ ಸ್ಕೇಟಿಂಗ್ ಕ್ಲಬಿನ ಅಧ್ಯಕ್ಷ ಕಿರಣಕುಮಾರ ತಿಳಿಸಿದರು.