ಯಲ್ಲಾಪುರ : ಕಾಡಿನಿಂದ ನಾಡಿಗೆ ಬರುವ ಚಿರತೆಗಳು ಜನರಲ್ಲಿ ಭಯ ಹುಟ್ಟಿಸುತ್ತಿದೆ. ಗೋಕರ್ಣ, ಕುಮಟಾದ ಕಡೆಗಳಲ್ಲಿ ಚಿರತೆಗಳ ಓಡಾಟ ಜನರಲ್ಲಿ ಭಯ ಮೂಡಿಸುತ್ತಿದ್ದು, ಇದೀಗ ಯಲ್ಲಾಪುರದಲ್ಲಿಯೂ ಕಪ್ಪು ಚಿರತೆಯ ಭಯ ಜನರನ್ನು ಕಾಡುತ್ತಿದೆ.
ತಾಲೂಕಿನ ಬಿಸಗೋಡ ಅರಣ್ಯ ವ್ಯಾಪ್ತಿಯ ಸಾರ್ವಜನಿಕರು ಸಂಚರಿಸುವ ರಸ್ತೆಯ ಮೇಲೆ ಕಪ್ಪು ಚಿರತೆಗಳು ಓಡಾಡುತ್ತಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಗ್ರಾಮಗಳ ಸಮೀಪ ರಾತ್ರಿ ಚಿರತೆಗಳು ಓಡಾಟ ನಡೆಸುತ್ತಿದ್ದು ಹೇಳಲಾಗುತ್ತಿದೆ. ಬೆಳಿಗ್ಗೆ ನರಸೂರಿನಿಂದ ಬಿಸಗೋಡಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಕಪ್ಪು ಚಿರತೆ ಕಾಣಿಸಿಕೊಂಡಿದ್ದು, ಆತ ಅದರ ಚಿತ್ರವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ್ದಾನೆ ಎನ್ನಲಾಗಿದೆ.
ಈ ಭಾಗದಲ್ಲಿ ಕಪ್ಪು ಚಿರತೆಗಳ ಓಡಾಟ ಬಹಳ ಹಿಂದಿನಿಂದಲೂ ಕಂಡುಬಂದಿದ್ದು ಇದೇ ವ್ಯಕ್ತಿ ಆರು ತಿಂಗಳ ಹಿಂದೆ ಚಿರತೆಯನ್ನು ಕಂಡು ಬಂದ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ನೋಡಿರುವುದಾಗಿ ತಿಳಿಸಿದ್ದಾರೆ. ಯಲ್ಲಾಪುರ ಅರಣ್ಯ ವ್ಯಾಪ್ತಿಯ ಬೇಡ್ತಿ ಹೊಳೆಯ ಆಸುಪಾಸಿನಲ್ಲಿ, ಮಾಗೋಡು ಜಲಪಾತದ ಅಕ್ಕಪಕ್ಕದಲ್ಲಿ ಕಪ್ಪು ಹಾಗೂ ಕೆಂಪು ಚಿರತೆಗಳು ಆಗಾಗ ಕಾಣಿಸಿಕೊಂಡಿರುವ ಉದಾಹರಣೆಯಿದೆ ಎನ್ನಲಾಗಿದೆ.
ಅರಬೈಲ್ ಕೆಳಾಸೆಯಲ್ಲಿ ಕೆಲವು ತಿಂಗಳ ಹಿಂದೆ ಮನೆಯ ಮುಂದೆ ಮೇಯಲು ಬಿಟ್ಟಿದ್ದ ದನಕರುಗಳನ್ನು ಚಿರತೆ ಅಥವಾ ಹುಲಿ ತಿಂದು ಹಾಕಿರುವುದು ವರದಿಯಾಗಿತ್ತು. ಆಗಾಗ ಒಳ ಗ್ರಾಮೀಣ ಭಾಗದಲ್ಲಿ ಮನೆಯಲ್ಲಿ ಸಾಕಿದ ಜಾನುವಾರುಗಳು ಕಾಡಿನಲ್ಲಿ ಮೇಯಲು ಹೋದಾಗ ಕಾಡುಪ್ರಾಣಿಗಳಿಗೆ ಆಹಾರವಾಗುತ್ತಿರುವುದು ವರದಿಯಾಗುತ್ತಿದೆ.
ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ಅರಣ್ಯದಂಚಿನ ಕಟ್ಟಡ ಹಾಗೂ ಖಾಲಿ ಜಾಗದಲ್ಲಿ ರಾತ್ರಿ ವೇಳೆ ವಾಸ್ತವ್ಯ ಮಾಡುವ ಬಿಡಾಡಿ ನಾಯಿಗಳು ಹಾಗೂ ಹಂದಿಗಳನ್ನು ಕಾಡುಪ್ರಾಣಿಗಳು ಬೇಟೆಯಾಡಿ ಎಳೆದುಕೊಂಡು ಹೋಗಿರುವ ಉದಾಹರಣೆ ಇದೆ ಎನ್ನಲಾಗಿದೆ. ಅದೇನೇ ಇದ್ದರೂ ಯಲ್ಲಾಪುರದಲ್ಲಿಯೂ ಚಿರತೆ ಭಯ ಪ್ರಾರಂಭವಾಗಿರುವುದು ಸುಳ್ಳಲ್ಲ.