ಕುಮಟಾ : ಸರಣಿ ರಜಾದಿನವಾದ್ದರಿಂದ ಉತ್ತರಕನ್ನಡಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಉತ್ತರ ಕನ್ನಡಕ್ಕೆ ಪ್ರವಾಸ ಬರುವವರು ಸಮುದ್ರದ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಇದರಿಂದಾಗಿ ಅದೆಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರು ಪ್ರವಾಸಿಗರು ಈಜಲು ತೆರಳುವುದು ಇಂತಹ ಸಂದರ್ಭಗಳಲ್ಲಿ ಅವಗಡಗಳು ಸಂಭವಿಸುವುದು ನಿರಂತರವಾಗಿ ನಡೆಯುತ್ತಿದೆ.
ಸಮುದ್ರದಲ್ಲಿ ಈಜಲು ಹೋಗಿ ಪ್ರವಾಸಿಗ ಕಾಣೆಯಾದ ಘಟನೆ ತಾಲೂಕಿನ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದಿದೆ. ಬೆಂಗಳೂರು ಮೂಲದ ರವಿ ನಂದನ್ ಸಮುದ್ರದಲ್ಲಿ ಕಾಣೆಯಾದ ಯುವಕನಾಗಿದ್ದಾನೆ.
ಭಾನುವಾರ ಬೆಂಗಳೂರಿನಿಂದ ಐದು ಜನ ಯುವಕರು ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದು, ಇವರಲ್ಲಿ ರವಿ ನಂದನ್ ಸಮುದ್ರದಲ್ಲಿ ಈಜಾಡಲು ಇಳಿದಿದ್ದಾನೆ. ಈ ವೇಳೆ ಅಲೆಗಳ ರಭಸಕ್ಕೆ ಈತ ಸಮುದ್ರದಲ್ಲಿ ತೇಲಿಹೋಗಿದ್ದಾನೆ.
ಗೋಕರ್ಣದ ಪೊಲೀಸರು ಈತನಿಗಾಗಿ ಸಮುದ್ರದಲ್ಲಿ ಹುಡುಕಾಟ ನಡೆಸಿದ್ದು ಯಾವುದೇ ಸುಳಿವು ದೊರೆತಿಲ್ಲ. ಬಹುತೇಕ ಈತ ಮೃತನಾಗಿರುವುದಾಗಿ ಪೊಲೀಸರು ತಿಳಿಸಿದ್ದು ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರವಾಸಿಗರು ನಿಯಮ ಮೀರಿ ವರ್ತಿಸುತ್ತಿರುವುದು ಅಧಿಕಾರಿಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.