ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಇಲ್ಲಿಗೆ ಸಮೀಪದ ಅಶೋಕೆಯಲ್ಲಿ ಈ ತಿಂಗಳ 20 ಹಾಗೂ 21ರಂದು ವೈಭವದ ಸಂಗೀತೋತ್ಸವ ಆಯೋಜಿಸಲಾಗಿದೆ.ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ತಾವು ಇಚ್ಛಿಸಿದ ಪಾರಂಪರಿಕ ಸಂಗೀತ ವಿದ್ಯೆ, ಕಲೆಯನ್ನು ಪ್ರಾತ್ಯಕ್ಷಿಕೆ ಮೂಲಕ ಕಲಿಯಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಈ ಸಂಗೀತೋತ್ಸವ ಆಯೋಜಿಸಲಾಗಿದೆ. ಎರಡು ದಿನಗಳ ಸಂಗೀತೋತ್ಸವದ ಸಾನ್ನಿಧ್ಯವನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವಹಿಸಲಿದ್ದು, ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ ಎಂದು ವಿವಿವಿ ಸಂಗೀತ ವಿಭಾಗದ ಮುಖ್ಯಸ್ಥ ರಘುನಂದನ ಬೇರ್ಕಡವು ಪ್ರಕಟಣೆಯಲ್ಲಿ ಹೇಳಿದ್ದಾರೆ.


ಎರಡೂ ದಿನಗಳ ಕಾಲ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯಾವಿಶ್ವ ಸಭಾಂಗಣದಲ್ಲಿ ಸಂಗೀತೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಮತ್ತು ವಾದ್ಯ ಸಂಗೀತಗಳ ಪ್ರಾತ್ಯಕ್ಷಿಕೆ, ನಾಡಿನ ಖ್ಯಾತ ಕಲಾವಿದರಿಂದ ಗಾಯನ ಮತ್ತು ವಾದನಗಳ ಪ್ರಸ್ತುತಿ ಹಾಗೂ ವಿದ್ಯಾರ್ಥಿಗಳ ಜತೆ ಸಂವಾದ ನಡೆಯಲಿದೆ. ಇದು ಕಲಾ ಸರಸ್ವತಿಯ ಆರಾಧನೆಯ ಹೊಚ್ಚ ಹೊಸ ಹೆಜ್ಜೆಗೆ ಮುನ್ನುಡಿಯಾಗಲಿದೆ ಎಂದು ಅವರು ವಿವರಿಸಿದ್ದಾರೆ.

RELATED ARTICLES  ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ: ಬಹುಭಾಷಾ ಕಥಾ ಗೋಷ್ಠಿ


ಸಂಗೀತೋತ್ಸವದಲ್ಲಿ ಬುಧವಾರ (ಅ. 20) ಕರ್ನಾಟಕ ಸಂಗೀತ ವೈವಿಧ್ಯ ಪ್ರಸ್ತುತಪಡಿಸಲಾಗುತ್ತಿದೆ. ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ನಿರ್ದೇಶನದಲ್ಲಿ ಇಡೀ ದಿನ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ವಿದುಷಿ ಕಾಂಚನ ಶ್ರೀರಂಜಿನಿ ಮತ್ತು ಶ್ರುತಿರಂಜಿನಿ (ಕಾಂಚನ ಸಹೋದರಿಯರು) ಅವರಿಂದ ಗಾಯನ, ವಿದ್ವಾನ್ ಕೆ.ಯು. ಜಯಚಂದ್ರ ರಾವ್ ಅವರಿಂದ ಮೃದಂಗ ವಾದ, ವಿದ್ವಾನ್ ಗಿರಿಧರ ಉಡುಪ ಅವರ ಘಟಂ, ವಿದ್ವಾನ್ ನಿತೀಶ್ ಅಮ್ಮಣ್ಣಾಯ ಅವರ ಕೊಳಲು ವಾದ, ವಿದ್ವಾನ್ ಕಾರ್ತಿಕ್ ಕೃಷ್ಣ ಅವರಿಂದ ತಬಲಾ, ವಿದ್ವಾನ್ ಕಾರ್ತಿಕ್ ವೈದಾತ್ರಿಯವರ ಖಂಜಿತ, ಮೋಚಿಂಗ್, ರಿದಂ ಪ್ಯಾಡ್, ಕೆ.ಜಿ.ಋತ ಅವರ ಪಿಟೀಲು ವಾದ, ಶ್ರೀ ರಬಿನಂದನ್ ಅವರ ಕೊನ್ನಕ್ಕೋಲು ವಾದನ ಮೊದಲ ದಿನದ ವಿಶೇಷ ಆಕರ್ಷಣೆಯಾಗಿರುತ್ತದೆ.

RELATED ARTICLES  ಸಮುದ್ರದಲ್ಲಿ ಜೀವಾಪಾಯದಲ್ಲಿದ್ದವನ ರಕ್ಷಣೆ.


ಸಂಗೀತೋತ್ಸವದ ಎರಡನೇ ದಿನವಾದ 21ರಂದು ಗುರುವಾರ ಹಿಂದೂಸ್ತಾನಿ ಸಂಗೀತದ ವೈವಿಧ್ಯಮಯ ಪ್ರಕಾರಗಳು ಪ್ರಸ್ತುತಗೊಳ್ಳಲಿವೆ. ಪಂಡಿತ ಪರಮೇಶ್ವರ ಹೆಗಡೆ, ಡಾ.ಅಶೋಕ ಹುಗ್ಗಣ್ಣವರ್, ವಿದ್ವಾನ್ ವಿಶ್ವೇಶ್ವರ ಭಟ್ ಖರ್ವ, ವಿದ್ವಾನ್ ಶ್ರೀಧರ ಹೆಗಡೆ ಅವರ ಗಾಯನ, ಪ್ರೊ.ರಾಮಚಂದ್ರ ವಿ.ಹೆಗಡೆ ಹಳ್ಳದಕೈ ಅವರಿಂದ ರುದ್ರವೀಣಾ, ಗೋಪಾಲಕೃಷ್ಣ ಹೆಗಡೆ ಮತ್ತು ಡಾ.ಉದಯ ಕುಲಕರ್ಣಿಯವರಿಂದ ತಬಲಾ ವಾದನ, ರಾಮಕೃಷ್ಣ ಹೆಗಡೆಯವರ ಸಿತಾರ್, ಸುಧೀರ್ ಹೆಗಡೆವರ ಬಾನ್ಸುರಿ, ಪ್ರಜ್ಞಾನ ಲೀಲಾಶುಕ ಉಪಾಧ್ಯಾಯ (ಸೂರಿ) ಅವರಿಂದ ಹಾರ್ಮೋನಿಯಂ ವಾದನ ಸಂಗೀತ ರಸಿಕರಿಗೆ ರಸದೌರಣ ಒದಗಿಸಲಿವೆ.
ಎರಡೂ ದಿನಗಳ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.