ಕುಮಟಾ: ಕಾಡಿನಿಂದ ಊರಿಗೆ ಆಹಾರ ಅರಸಿ ಬಂದ ಬೃಹತ್ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಚಂದಾವರದ ಸುಲ್ತಾನ ಕೇರಿಯ ನಾಸೀರ್ ಶೇಖ ಅವರ ಮನೆಯ ಹಿಂಭಾಗದ ಕಿರುಜಾಡಿಯಿಂದ ಆಗಮಿಸಿದ್ದ ಸುಮಾರು 12 ಅಡಿ ಉದ್ದದ ಹೆಬ್ಬಾವು ಎರಡು ಕೋಳಿ ಹಾಗೂ ಮರಿಗಳನ್ನು ನುಂಗಿತ್ತು.
ಮನೆಯ ಹಿಂಭಾಗದಲ್ಲಿದ್ದ ಗಿಡದ ಪೊದರಿನಲ್ಲಿ ಬುಧವಾರ ಬೆಳಿಗ್ಗೆ ಮಕ್ಕಳ ಕಣ್ಣಿಗೆ ಬಿದ್ದಿದ್ದ ಈ ಹಾವಿನಿಂದಾಗಿ ಭಯಭೀತರಾದ ಮಕ್ಕಳು ಹಾಗೂಮನೆಯ ಸದಸ್ಯರು ಅಕ್ಕಪಕ್ಕದ ಜನರಿಗೆ ವಿಷಯ ತಿಳಿಸಿದರು. ಹಿರಿಯರೊಬ್ಬರು ಅರಣ್ಯ ಇಲಾಖೆಯ ಉಪವಿಭಾಗಾಧಿಕಾರಿ ಗಣಪತಿ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯ ಪ್ರವೃತ್ತರಾದ ಅವರು ಸಿಬ್ಬಂದಿಗೆ ನಿರ್ದೇಶನ ನೀಡಿದ್ದರು. ಸ್ಥಳಕ್ಕಾಗಮಿಸಿದ ಸಿಬ್ಬಂದಿ
ಗಿಡದ ಮೇಲಿದ್ದ ಹೆಬ್ಬಾವನ್ನು ಹಿಡಿಯಲು ಹರ
ಸಾಹಸ ಪಟ್ಟರು. ಗಿಡದ ಟೊಂಗೆಗಳನ್ನು ಕತ್ತರಿಸಿ ಹೆಬ್ಬಾವನ್ನು ನೆಲಕ್ಕೆ ಬೀಳಿಸಿ ಹಿಡಿಯಲಾಯಿತು. ನಂತರ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.