ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಕ್ಕಳ ಪಾಠ ಬೋಧನೆಗೆ ತೊಂದರೆಯಾಗದಂತೆ ದಿನಾಂಕ 21-10-2021 ರಂದು ಕಪ್ಪು ಪಟ್ಟಿ ಧರಿಸಿ ಶಿಕ್ಷಕರು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಲ್ಲ ಶಾಲೆಗಳಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ದಿನಾಂಕ 29-10-2021 ರ ವರೆಗೆ ನಡೆಯಲಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದ ಗಾಂವಕರ್ ತಿಳಿಸಿದರು. ಶಿಕ್ಷಕರ ಪ್ರಮುಖ ಬೇಡಿಕೆಯಾದ ವರ್ಗಾವಣೆ ಕಳೆದ 2 ವರ್ಷದಿಂದ ನಡೆದಿರುವುದಿಲ್ಲ. NPS ರದ್ದು ಪಡಿಸಿ OPS ಜಾರಿಗೆ ತರಬೇಕು. ಪ್ರಾಥಮಿಕ ಶಾಲಾ ಶಿಕ್ಷಕ ಪದವೀಧರರಿಗೆ ಪದವೀಧರ ಶಿಕ್ಷಕರೆಂದು ಪರಿಗಣಿಸಿ 6-8 ನೇ ತರಗತಿಗೆ ಅವರನ್ನು ಪರಿಗಣಿಸಬೇಕು. ಭಡ್ತಿಯಲ್ಲಿ ಆಧ್ಯತೆ ನೀಡಬೇಕು. 2008 ಕ್ಕೆ ಪೂರ್ವದಲ್ಲಿ ನೇಮಕವಾದ ಎಲ್ಲಾ ಶಿಕ್ಷಕರಿಗೆ ವರ್ಗಾವಣಾ ಸಂದರ್ಭಗಳಲ್ಲಿ ಖಾಲಿ ಇದ್ದ ಎಲ್ಲಾ ಹುದ್ದೆಗಳನ್ನು ನೀಡುವಂತಾಗಬೇಕು. ಗ್ರಾಮೀಣ ಕ್ರಪಾಂಕದಿಂದ ವಂಚಿತರಾದ ಶಿಕ್ಷಕರಿಗೆ ಹಿಂದಿನ ಸೇವೆಯನ್ನು ಪರಿಗಣಿಸಿ ಆರ್ಥಿಕ ಸೌಲಭ್ಯ ನೀಡುವಂತಾಗಬೇಕು. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿ ಶಿಕ್ಷಕರಿಗೆ ಖಾಲಿ ಹುದ್ದೆ ತೋರಿಸುವಂತಾಗಬೇಕು. ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಮುಖ್ಯ ಶಿಕ್ಷಕರುಗಳಿಗೆ 15, 20, 25 ರ ವಾರ್ಷಿಕ ಭಡ್ತಿ, ದೈಹಿಕ ಶಿಕ್ಷಕರ ಸಮಸ್ಯೆಗಳು ಇವುಗಳನ್ನು ಬಗೆಹರಿಸಬೇಕು. ಪ್ರೌಢ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಂಡು ಬಾಹ್ಯವಾಗಿ M.A. M.Ed, M.Sc ಪದವಿಗಳಿಸಿದ ಶಿಕ್ಷಕರಿಗೆ ಕಾಲೇಜು ಲೆಕ್ಚರ್ ಆಗಿ ಭಡ್ತಿ ನೀಡಲಾಗಿದೆ. ಅದೇ ರೀತಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡು ಬಾಹ್ಯವಾಗಿ B.A. B.Ed, M.A. M.Ed. ಪದವಿಗಳಿಸಿದ ಶಿಕ್ಷಕರಿಗೆ ಯಾಕೆ ಪದವೀಧರ ಶಿಕ್ಷಕರೆಂದು ಪರಿಗಣಿಸಬಾರದು ಎಂಬುದು ಶಿಕ್ಷಕರ ಪ್ರಶ್ನೆಯಾಗಿದೆ. ಭಡ್ತಿ ನೀಡುವಾಗ, ವರ್ಗಾವಣೆ ಮಾಡುವಾಗ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆಯ ಮಾನದಂಡ ಪ್ರೌಢ ಶಾಲೆಗಳಿಗಿಂತ ಪ್ರಾಥಮಿಕ ಶಾಲೆಗಳಿಗೆ ಏಕೆ ವಿಭಿನ್ನವಾಗಿದೆ? ಈ ತಾರತಮ್ಯ ಏಕೆ ಎಂಬುದು ಶಿಕ್ಷಕ ಸಮುದಾಯದ ಅಸಮಾಧಾನವಾಗಿದೆ.

RELATED ARTICLES  ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಿವಿಎಸ್‌ಕೆ ವಿದ್ಯಾರ್ಥಿಗಳು

ಶಿಕ್ಷಕರ ಸಮಸ್ಯೆ ಬಗೆಹರಿಯದೇ ಹೋದಲ್ಲಿ ಸರಕಾರ ಅಥವಾ ಇಲಾಖೆ ಶಿಕ್ಷಕರ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ದಿನಾಂಕ 30-10-2021 ರಿಂದ 10-11-2021 ರ ವರೆಗೆ ಶಾಲಾ ಮಧ್ಯಾಹ್ನದ ಬಿಸಿ ಊಟದ ಮಾಹಿತಿಯನ್ನು ಅಪ್ ಡೇಟ್ ಮಾಡದೇ ಅಸಹಕಾರ ವ್ಯಕ್ತಪಡಿಸುವುದು. ದಿನಾಂಕ 11-11-2021 ರಿಂದ 18-11-2021 ರವರೆಗೆ STS ಮಾಹಿತಿಯನ್ನು ಅಪ್ ಲೋಡ್ ಮಾಡದೇ ಶಿಕ್ಷಕರ ಸಮಸ್ಯೆಗಳ ಕುರಿತು ಗಮನಸೆಳೆಯುವುದು. ಇದಾದ ನಂತರ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ಎಲ್ಲಾ ಸದಸ್ಯರೂ ರಾಜ್ಯ ಮಟ್ಟದಲ್ಲಿ Rally ಹಾಗೂ ಧರಣಿ ಸತ್ಯಾಗ್ರಹ ಮಾಡುವುದು. ಹೀಗೆ ಸಂಘ ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ.

RELATED ARTICLES  ಪಿ. ಎಫ್. ಐ ಮತ್ತು ಎಸ್.ಡಿ.ಪಿ ಐ ನಂತಹ ಸಂಘಟನೆ ಬ್ಯಾನ್ ಮಾಡಲು ಮನವಿ.

ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಇಲಾಖೆಗೆ ಎಲ್ಲಾ ಮಾಹಿತಿಗಳನ್ನು ನೀಡುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಶಿಕ್ಷಕರಿಗೆ ನ್ಯಾಯವಾಗಿ ಸಿಗಬೇಕಾದ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ಮತ್ತು ಇಲಾಖೆ ಮೀನಾಮೇಷ ಎಣಿಸುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ ಎಂದು ಜಿಲ್ಲಾ ಸಂಘದ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು. ಅದರಂತೆ ಉತ್ತರಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಾನ್ಯ ಶಿಕ್ಷಣ ಮಂತ್ರಿಗಳು, ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಹಾಗೂ ಮಾನ್ಯ ಆಯುಕ್ತರಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಸಂಘದ ಮುಂದಿನ ನಡೆಯ ಬಗ್ಗೆ ಮನವಿ ಸಲ್ಲಿಸುವ ಕಾರ್ಯ ನಡೆಯಿತು.