ಗುರುಗಾಂವ್: ಶಾಲಾ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಗಾಂವ್ ನಲ್ಲಿ ವ್ಯಾಪಕ ಪ್ರತಿಭಟನೆ ನಡೆದಿರುವಂತೆಯೇ ರ‍್ಯಾನ್ ಇಂಟರ್’ನ್ಯಾಷನಲ್ ಖಾಲೆಯ ಶಿಕ್ಷಕರನ್ನ ಹಾಗೂ ಪ್ರಾಂಶುಪಾಲರನ್ನು ಸೋಮವಾರ ಬಂಧಿಸಲಾಗಿದೆ.
ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಪ್ರಕರಣದಲ್ಲಿ ಶಾಲಾ ಸಿಬ್ಬಂದಿಗಳ ಕರ್ತವ್ಯ ಲೋಪ ಹಾಗೂ ಭದ್ರತೆಯಲ್ಲಿ ಗಂಭೀರ ನಿರ್ಲಕ್ಷ್ಯವಹಿಸಿರುವ ಆರೋಪದ ಮೇರೆಗೆ ಇಂದು ಕೆಲ ಶಿಕ್ಷಕರನ್ನು ಹಾಗೂ  ಪ್ರಾಂಶುಪಾಲರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಶಾಲಾ ಬಾಲಕನ ಹತ್ಯೆ ಪ್ರಕರಣವನ್ನು ಹರ್ಯಾಣ ಸರ್ಕಾರದ ಮೂವರು ಎಸ್ ಐಟಿ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದ್ದು, ಈಗಾಗಲೇ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಅಂತೆಯೇ ಪ್ರಕರಣದ  ತನಿಖೆ ಮುಂದುವರೆದಿದ್ದು, ಶಾಲೆಯಲ್ಲಿ ಮಕ್ಕಳಿಗೆ ಸೂಕ್ತ ಭದ್ರತೆ ಇರಲಿಲ್ಲ ಎಂಬ ಗಂಭೀರ ವಿಚಾರವನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದೇ ಕಾರಣಕ್ಕೆ ಶಾಲೆಯ ಮಾಲೀಕರ ವಿರುದ್ಧ ಮಕ್ಕಳ ರಕ್ಷಣಾ ಕಾಯ್ದೆಯ ಅಡಿಯಲ್ಲಿ  ಪ್ರಕರಣ ದಾಖಲಿಸುವಂತೆ ಸ್ವತಃ ಹರ್ಯಾಣ ಸರ್ಕಾರ ಹೇಳಿತ್ತು.
ಬಾಲಕನ ಹತ್ಯೆ ಹಿನ್ನಲೆಯಲ್ಲಿ ಇಂದು ಮತ್ತು ನಾಳೆಯೂ ರ‍್ಯಾನ್ ಇಂಟರ್’ನ್ಯಾಷನಲ್ ಖಾಲೆಯನ್ನು ಮುಚ್ಚಲಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಶಾಲಾ ಮಕ್ಕಳ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು  ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ. ಪ್ರೀ ನರ್ಸರಿ, ಜೂನಿಯರ್ ಹಾಗೂ ನರ್ಸರಿ ಶಾಲೆಗಳಿಗೆ ಮುಂದಿನ ನೋಟಿಸ್ ವರೆಗೂ ರಜೆ ನೀಡಲಾಗಿದ್ದು, 6ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಬುಧವಾರದವೆರಗೂ ರಜೆ ನೀಡಲಾಗಿದೆ.  ಗುರುಗ್ರಾಮದಲ್ಲಿರುವ ಎಲ್ಲ ನಾಲ್ಕೂ ಶಾಲೆಗಳಿಗೂ ಈ ರಜೆ ಅನ್ವಯಿಸುತ್ತದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
RELATED ARTICLES  ಉತ್ತರಕನ್ನಡದಲ್ಲಿ ಇಂದು ಐವರು ಕೊರೋನಾಕ್ಕೆ ಬಲಿ..!