ಭಟ್ಕಳ : ಪರವಿರೋಧ ಚರ್ಚೆಯ ನಂತರ ಸೋಮವಾರ ನಡೆಯಬೇಕಾಗಿದ್ದ ಪುರಸಭೆ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯನ್ನು ಉಪವಿಭಾಗಾಧಿಕಾರಿ ಮಮತಾ ದೇವಿ ಆದೇಶದನ್ವಯ ಪುರಸಭೆ ಸದಸ್ಯರ ತುರ್ತು ಸಭೆ ಕರೆದು ತಾತ್ಕಾಲಿಕ ಮುಂದೂಡಲಾಗಿದೆ. ಸೋಮವಾರ ಸದಸ್ಯರು ಉಪವಿಭಾಗಾಧಿಖಾರಿ ಮಮತಾ ದೇವಿ ಭೇಟಿ ಮಾಡಿ ಮುಂದಿನ ದಿನಾಂಕ ನಿಗದಿಪಡಿಸಲು ನಿರ್ಧರಿಸಲಾಗಿದೆ.
ಈ ಸಮಧರ್ಭದಲ್ಲಿ ಪುರಸಭೆ ಅಧ್ಯಕ್ಷ ಪರ್ವೇಜ ಕಾಶೀಂಜೀ ಮಾತನಾಡಿ ಉಪವಿಭಾಗಾಧಿಕಾರಿ ಮಮತಾ ದೇವಿ ಮುಂಬರುವ ದೀಪಾವಳಿ ಹಬ್ಬ, ಪೊಲೀಸ ರಕ್ಷಣೆ ಸೇರದಂತೆ ೨೧ ಉಲ್ಲೇಖ ನೀಡಿ ಅಂಗಡಿ ಮಳಿಗೆ ಹರಾಜು ಮುಂದೂಡಲು ಆದೇಶಿಸಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಸದಸ್ಯರಾದ ಅಬ್ದುಲ್ ರವೂಫ್, ಅಲ್ತಾಫ ಖರೂರಿ, ಅಜೀಮ್ ವಿರೋಧ ವ್ಯಕ್ತಪಡಸಿ ನಿಗದಿತ ದಿನಾಂಕದಂದೆ ಹರಾಜು ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿದರು.
ಸದಸ್ಯರಾದ ಕೃಷ್ಣಾನಂದ ಫೈ, ಫಾಸ್ಕಲ ಗೋಮ್ಸ, ರಾಘವೇಂದ್ರ ಶೇಟ್ ಹಾಗೂ ಫಯಾಜ್ ಮುಲ್ಲಾ ಮಾತನಾಡಿ ತಾಲ್ಲೂಕು ದಂಡಾಧಿಕಾರಿಗಳಾದ ಉಪವಿಭಾಗಾಧಿಕಾರಿ ಆದೇಶಕ್ಕೆ ನಾವು ಬೆಲೆ ನೀಡಬೇಕು. ಕಳೆದ ೬ ವರ್ಷದಿಂದ ಈ ಪ್ರಕ್ರಿಯೆ ಮಾಡದ ನಾವು ಇನ್ನೂ ಕೆಲವು ದಿನ ಮುಂದುಡೋಣಾ ನಂತರ ಉಪವಿಭಾಗಾಧಿಕಾರಿ ಹಾಗೂ ಸದಸ್ಯರು ಪುನಃ ಸಭೆ ಸೇರಿ ಚರ್ಚಿಸಿ ಅಂಗಡಿ ಮರು ಹರಾಜಿಗೆ ದಿನಾಂಕ ನಿಗದಿಪಡಿಸೋಣ ಎಂದರು.
ಅಧ್ಯಕ್ಷ ಪರ್ವೇಜ್ ಕಾಶೀಂಜೀ ಮಾತನಾಡಿ ಪುರಸಭೆ ಒಡೆತನದ ಅಂಗಡಿಗಳನ್ನು ಎಷ್ಟು ವರುಷ ಅವರಿಗೆ ನೀಡಬೇಕು. ಇದರಿಂದ ಪುರಸಭೆ ಆದಾಯಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ಶೀಘ್ರದಲ್ಲಿ ಇದನ್ನು ಮರುಹರಾಜು ಮಾಡುವುದು ಅನೀವಾರ್ಯ. ಆದರೆ ಹರಾಜು ಪಾರದರ್ಶಕವಾಗಿರಲಿ ಎಂದು ಜಿಲ್ಲಾಧಿಕಾರಿ ಉಪವಿಬಾಗಾಧಿಕಾರಿಗಳನ್ನು ಈ ಹರಾಜಿಗೆ ನೊಡಲ್ ಅಧಿಕಾರಿಯಾಗಿ ನೇಮಿಸಿದ್ದಾರೆ. ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಅವರ ಉಪಸ್ಥಿತಿ ಇರದಿದ್ದರೆ ಹರಾಜು ಮಾನ್ಯವಾಗುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ರಾಧಿಕಾ ಎಸ್, ಯೋಜನಾಧಿಕಾರಿ ವೇಣುಗೋಪಾಲ ಶಾಸ್ತಿ, ಕಂದಾಯ ಅಧಿಕಾರಿ ದಯಾನಂದ ದೇಸಾಯಿ ಇದ್ದರು.