ಕುಮಟಾ : ಪಟ್ಟಣದ ತಾ.ಪಂ. ಸಭಾಭವನದಲ್ಲಿ ತಾಲೂಕಾಡಳಿತ ಆಯೋಜಿಸಿದ್ದ ವೀರ ವನಿತೆ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಶಾಸಕರಾದ ದಿನಕರ ಶೆಟ್ಟಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕಿತ್ತೂರು ರಾಣಿ ಚೆನ್ನಮ್ಮ ಭಾರತದ ಧೀರ ಮಹಿಳೆ ಯರಲ್ಲಿ ಪ್ರಮುಖರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಮುಂಚೆ ಬ್ರಿಟಿಷರ ಅಧಿಪತ್ಯಕ್ಕೆ ಧಿಕ್ಕಾರವನ್ನು ಹೇಳಿ ಈ ನೆಲದ ಸ್ವಾಭಿಮಾನ ಹಾಗೂ ಶೌರ್ಯಕ್ಕೆ ಮತ್ತೊಂದು ಹೆಸರಾಗಿ ತಮ್ಮ ಬದುಕನ್ನು ಇವತ್ತಿಗೂ ಮಾದರಿಯಾಗಿ ನಮ್ಮುಂದೆ ತೆರೆದಿಟ್ಟಿದ್ದಾರೆ ಎಂದರು.
ಉಪನ್ಯಾಸಕ ರಾಮಚಂದ್ರ ಮಡಿವಾಳ ಮಾತನಾಡಿ ಛಲ ಮತ್ತು ಪ್ರತಿಭೆ ಇದ್ದಲ್ಲಿ ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂಬುದನ್ನು ಚನ್ನಮ್ಮನಿಂದ ನಾವು ಕಲಿಯಬೇಕು. ಇತಿಹಾಸದಲ್ಲಿ ಹೆಣ್ಣನ್ನು ಭೂಮಿ, ದೇವಿ, ದುರ್ಗಿಗೆ ಹೋಲಿಸಲಾಗಿದೆ. ತಾಳ್ಮೆಗೂ ಒಂದು ಮಿತಿ ಇದೆ. ಅದನ್ನು ಮೀರಿದರೆ ಹೆಣ್ಣು ದುರ್ಗಿ ಅವತಾರ ತಾಳುತ್ತಾಳೆ ಎಂಬುದಕ್ಕೆ ರಾಣಿ ಚನ್ನಮ್ಮ ನಿದರ್ಶನ. ತನ್ನ ಸಣ್ಣ ಸಾಮ್ರಾಜ್ಯ ಕಾಪಾಡಿಕೊಳ್ಳಲು ಬ್ರಿಟಿಷರ ವಿರುದ್ಧ ಸಿಡಿದೆದ್ದ ದಿಟ್ಟ ಮಹಿಳೆ ಚನ್ನಮ್ಮ. ಆಕೆಯ ಧೈರ್ಯ, ಸಾಹಸವನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದರು.
ಈ ಸಂದರ್ಭದಲ್ಲಿ ತಾ.ಪಂ. ಆಡಳಿತಾಧಿಕಾರಿ ಈಶ್ವರ ನಾಯ್ಕ, ಇಓ ಸಿ.ಟಿ.ನಾಯ್ಕ, ತಹಶೀಲ್ದಾರ್ ವಿವೇಕ ಶೇಣ್ವಿ, ಬಿ ಗ್ರೇಡ್ ತಹಸೀಲ್ದಾರ್ ಅಶೋಕ ಭಟ್ಟ ಇತರರು ಹಾಜರಿದ್ದರು.