೨೦೨೧ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ರೇಣುಕಾ ರಮಾನಂದ ಅವರ ’ಸಂಬಾರ ಬಟ್ಟಲ ಕೊಡಿಸು’ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಒಟ್ಟೂ 238 ಹಸ್ತಪ್ರತಿಗಳಲ್ಲಿ ಆರು ಜನ ತೀರ್ಪುಗಾರರು ಅಂತಿಮ ಹಂತಕ್ಕೆ ಹತ್ತನ್ನು ಆಯ್ದು ಕಳಿಸಿದ್ದರು.. ಕವಿ, ವಿಮರ್ಶಕರಾದ ಬಾನು ಮುಷ್ತಾಕ್ ಮತ್ತು ಕೆ. ಫಣಿರಾಜ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು.
’ಬದುಕಿನ ಅಸ್ತಿತ್ವದ ಸ್ಥಿತಿ, ಅದರಿಂದ ಉಂಟಾಗುವ ಆತಂಕಗಳು ಹಾಗೂ ಅವುಗಳನ್ನು ಎದುರಿಸುವ ಭಂಡ ಸಂಕಲ್ಪ ಭಾವವನ್ನು ಭಾಷೆಯನ್ನು ಮಾತ್ರವೇ ಪ್ರಮಾಣವಾಗಿಟ್ಟುಕೊಂಡು ಚಿತ್ರವತ್ತಾಗಿ ಕಟ್ಟುವ ಬಗೆಗಾಗಿ “ಸಂಬಾರ ಬಟ್ಟಲ ಕೊಡಿಸು” ನಮ್ಮ ಆಯ್ಕೆ’ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ ಎಂದು ವಿಭಾ ಪ್ರಶಸ್ತಿಯ ಸಂಚಾಲಕರಾದ ಸುನಂದಾ ಪ್ರಕಾಶ ಕಡಮೆ ಹಾಗೂ ಬಸು ಲಡಾಯಿ ಅವರು ತಿಳಿಸಿದ್ದಾರೆ.
ರೇಣುಕಾ ರಮಾನಂದ ಅವರು ಉತ್ತರಕನ್ನಡ ಜಿಲ್ಲೆಯ ಅಂಕೋಲದ ಶೆಟಗೇರಿಯವರು. ವೃತ್ತಿಯಲ್ಲಿ ಶಿಕ್ಷಕಿ. ೨೦೧೭ ರಲ್ಲಿ ಪ್ರಕಟವಾದ ಇವರ ಮೊದಲ ಕವಿತಾ ಸಂಕಲನ ’ಮೀನು ಪೇಟೆಯತಿರುವು’ ಗೆ ಕರ್ನಾಟಕ ರಾಜ್ಯ ಸಾಹಿತ್ಯಅಕಾಡೆಮಿ ಬಹುಮಾನ, ಮುಂಬೈ ಸುಶೀಲಾ ಶೆಟ್ಟಿಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಕಾವ್ಯ ಮಾಣಿಕ್ಯ ಪುರಸ್ಕಾರ, ಹರಿಹರಶ್ರೀ ಪ್ರಶಸ್ತಿ, ಕೆ.ವಿ ರತ್ನಮ್ಮ ದತ್ತಿ ಇನ್ನಿತರ ಪ್ರಶಸ್ತಿಗಳು ದೊರೆತಿವೆ. ಇವರ ಬಿಡಿ ಕಥೆ, ಕವಿತೆಗಳಿಗೆ ಮುಂಬೈ ನೇಸರು ಜಾಗತಿಕ ಬಹುಮಾನ, ಜೀವನ ಪ್ರಕಾಶನ ಯುಗಾದಿ ಕಾವ್ಯ ಬಹುಮಾನ, ಕರಾವಳಿ ಮುಂಜಾವು ದೀಪಾವಳಿ ಕಥಾ ಬಹುಮಾನ, ತುಷಾರದ ಸಾಹಿತ್ಯಾಂಜಲಿ ಕ್ಯಾಲಿಫೋರ್ನಿಯಾ ಕಥಾ ಬಹುಮಾನ, ಮುಂಬೈ ಗೋಕುಲವಾಣಿ ಕಥಾ ಬಹುಮಾನ, ಗುಲ್ಬರ್ಗಾವಿ.ವಿ ಜಯತೀರ್ಥ ರಾಜಪುರೋಹಿತ ಕಥಾ ಬಹುಮಾನಗಳು ದೊರಕಿವೆ. ಇಟಲಿಯ ಪಿಯಾಸೆಂಜಾ ಮ್ಯೂಸಿಯಂ ನಲ್ಲಿ ಇವರ ಕವಿತೆ ದಾಖಲಾಗಿದೆ. ಕಥೆ, ಕವಿತೆ, ಅಂಕಣಗಳಲ್ಲಿ ಉತ್ತರಕನ್ನಡದ ದಟ್ಟ ಪ್ರಾದೇಶಿಕತೆಯ ಸೊಗಡಿನಲ್ಲಿ ಬರೆವ ರೇಣುಕಾ ಸಾಹಿತ್ಯ ಜಗತ್ತಿಗೆ ಪರಿಚಿತ ಹೆಸರು