ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಮುಖಂಡರು ತಮ್ಮ ಹೋರಾಟಕ್ಕೆ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಬೆಂಬಲ ಸೂಚಿಸಿರುವುದಾಗಿ ಹೇಳಿದ್ದಾರೆ.ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಭಾನುವಾರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದರು.
ತಮ್ಮ ಬೇಡಿಕೆಗೆ ಸ್ವಾಮೀಜಿ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾಗಿ ಪಾಟೀಲ್ ಹೇಳಿದ್ದಾರೆ, ಲಿಂಗಾಯತ ಧರ್ಮವೇ ಅಂತಿಮ. ಇದರಲ್ಲಿ ಯಾವುದೇ ಸಂಶಯ ಬೇಡ. ವೀರಶೈವ ಎಂಬುದು ಇತ್ತೀಚೆಗೆ ಸೇರಿಕೊಂಡಿದೆ ಎಂದು ಶ್ರೀಗಳು ಸ್ಪಷ್ಟ ನುಡಿಗಳಲ್ಲಿ ತಿಳಿಸಿದ್ದಾರೆ ಎಂದು ಪಾಟೀಲ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಸಿದ್ದಗಂಗಾ ಶ್ರೀಗಳ ಆಶೀರ್ವಾದದಿಂದ ನಾನು ಭಾವುಕನಾಗಿದ್ದೇನೆ. ನನ್ನ ಜೀವನದಲ್ಲಿ ಇದು ಮರೆಯಲಾರದ ದಿನ ಎಂದು ಪಾಟೀಲ್ ಹೇಳಿದ್ದಾರೆ. ನಡೆದಾಡುವ ಬಸವಣ್ಣ ಎಂದೇ ಖ್ಯಾತರಾಗಿರುವ ಶ್ರೀಗಳ ಬೆಂಬಲದಿಂದ ನಮ್ಮ ಹೋರಾಟಕ್ಕೀಗ ಆನೆ ಬಲ ಬಂದಿದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸಿದ್ದಗಂಗಾ ಶ್ರೀಗಳು ಸಮುದಾಯದ ಸರ್ವೋಚ್ಚ ಸ್ವಾಮೀಜಿ. ಇವರ ನಂತರವೇ ಇನ್ನುಳಿದವರು. ಇವರ ಹೇಳಿಕೆಯ ಮುಂದೆ ನಾಡಿನ ಇನ್ನಾವುದೇ ಸ್ವಾಮೀಜಿಗಳ ಮಾತು, ಹೇಳಿಕೆ, ಸ್ಪಷ್ಟನೆ ನಮ್ಮ ಪಾಲಿಗೆ ಗೌಣವಾಗಲಿವೆ. ಯಾರ ಮಾತಿಗೂ ಹೆಚ್ಚು ತಲೆ ಕೆಡಿಸಿಕೊಳ್ಳದೇ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನಡೆಸುತ್ತಿರುವ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದ್ದೇವೆ’ ಎಂದೂ ಅವರು ಸ್ಪಷ್ಟಪಡಿಸಿದರು.