ಯಲ್ಲಾಪುರ: ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳು ಗ್ರಾಮದಲ್ಲಿ ಆತಂಕ ಸೃಷ್ಟಿಸುವ ಘಟನೆ ಹೊಸದಲ್ಲದಿದ್ದರೂ ಉತ್ತರಕನ್ನಡದ ಯಲ್ಲಾಪುರದ ಜನರಿಗೆ ಇದು ಹೊಸ ವಿಚಾರ. ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯ ಬಾರೆ ಗ್ರಾಮ ನೀರಹಕ್ಲು ಸಮೀಪ ಎರಡು ಆನೆಗಳು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ.
ಕಾಳಿ ನದಿಯಂಚಿನ ಅಣಶಿ ಅಭಯಾರಣ್ಯದಿಂದ ಈ ಆನೆಗಳು ಬಂದು, ಕದ್ರಾ ಜಲಾಶಯದ ಮೂಲಕ ಅರಣ್ಯ ಪ್ರದೇಶದಿಂದ ಯಲ್ಲಾಪುರ ಕಾರವಾರ ಗಡಿಯಂಚಿನ ಹರೂರ ಬಳಿ ಅರಣ್ಯಕ್ಕೆ ದಾರಿ ತಪ್ಪಿ ಬಂದಿರಬಹುದು ಎನ್ನಲಾಗಿದೆ. ಈ ಭಾಗದಲ್ಲಿ ಒಂದೆರಡು ದಿನ ಕಾಡಿನಲ್ಲಿ ಇದ್ದು ಮತ್ತೆ ವಾಪಸ್ ಅಣಶಿ ಅಭಯಾರಣ್ಯಕ್ಕೆ ಹಿಂದಿರುಗಬಹುದು. ಹೀಗಾಗಿ ಸ್ಥಳೀಯರು ಭಯಪಡುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆಯವರು ಸ್ಪಷ್ಟಪಡಿಸಿದ್ದಾರೆ.