ಬೆಂಗಳೂರು: ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಲ್ಲಿ ಅ.25ರಿಂದ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ಕಳೆದ 20 ತಿಂಗಳುಗಳಿಂದ ಬಂದ್ ಆಗಿದ್ದ ಈ ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಶುರುವಾಗಿದೆ.ಮಕ್ಕಳ ಸ್ವಾಗತಕ್ಕೆ ಬಹುತೇಕ ಶಾಲೆ ಆವರಣ, ಕೊಠಡಿಗಳನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದು, ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ.
ಶಾಲೆಗಳಲ್ಲಿ ಮೊದಲ 5 ದಿನಗಳು ಅರ್ಧ ದಿನವಷ್ಟೇ ಕ್ಲಾಸ್‌ಗಳು ನಡೆಯಲಿವೆ. ಇನ್ನುಳಿದ ಎರಡು ದಿನ ಶಾಲೆ ಕೊಠಡಿಗಳ ಕ್ಲಿನಿಂಗ್, ಶೇಕಡಾ 50ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅವಕಾಶ ನೀಡಲಾಗಿದೆ. ಪಾಸಿಟಿವಿಟಿ ದರ ಶೇಕಡಾ 1ಕ್ಕಿಂತ ಕಡಿಮೆ ಇರುವಲ್ಲಿ ಮಾತ್ರ ಸ್ಕೂಲ್ ಓಪನ್ ಮಾಡಲಾಗುತ್ತಿದೆ. ಮಕ್ಕಳಿಗೆ ಹಾಜರಿ ಕಡ್ಡಾಯವಿಲ್ಲ.ಭೌತಿಕ ತರಗತಿಗೆ ಹಾಜರಾಗಲು ಮಕ್ಕಳಿಗೆ ಪೋಷಕರ ಒಪ್ಪಿಗೆ ಕಡ್ಡಾಯವಾಗಿರಲಿದೆ. ಈ ವೇಳೆ ಶಿಕ್ಷಣ ಇಲಾಖೆಯ ಮಾರ್ಗಸೂಚಿ ಪಾಲನೆ ಮಾಡುವುದು ಕಡ್ಡಾಯವಾಗಿರಲಿದೆ. ಜೊತೆಗೆ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಇನ್ನು 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ಶೀಲ್ಡ್ ಬಳಸಬೇಕಿದೆ.
ಪ್ರಸಕ್ತ ಸಾಲಿನಲ್ಲಿ ರಾಜ್ಯದ 44,616 ಸರ್ಕಾರಿ ಪ್ರಾಥಮಿಕ ಮತ್ತು 19645 ಅನುದಾನ ರಹಿತ ಹಾಗೂ ಅನುದಾನಿಕ ಖಾಸಗಿ ಶಾಲೆಗಳಲ್ಲಿ 1 ರಿಂದ 5ನೇ ತರಗತಿಗಳಿಗೆ ಒಟ್ಟು 46 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರವೇಶ ಪಡೆದುಕೊಂಡಿದ್ದಾರೆ. ಆದರೆ, ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವುದು ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಇದರ ನಡುವೆ ಮಕ್ಕಳಿಗೆ ವೈರಲ್, ಡೆಂಘೀ, ಮಲೇರಿಯಾ ಜ್ವರ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ.
ಅಕ್ಟೋಬರ್ 30ರವರೆಗೆ ಅರ್ಧದಿನ ಮಾತ್ರ ತರಗತಿ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ, ಶನಿವಾರ ಬೆಳಗ್ಗೆ 8ರಿಂದ 11.40ರವರೆಗೆ ತರಗತಿ ನಡೆಸಬೇಕು ಎಂದು ಸರ್ಕಾರ ಸೂಚಿಸಿದ್ದು, ನವೆಂಬರ್ 2ರಿಂದ ಪೂರ್ಣಾವಧಿ ತರಗತಿಗಳು ಅಂದರೆ, ಬೆಳಗ್ಗೆ 10ರಿಂದ ಸಂಜೆ 4.30ರವರೆಗೂ ತರಗತಿಗಳು ನಡೆಯಲಿವೆ.