ದಾಂಡೇಲಿ: ಕಾಳಿನದಿಯಲ್ಲಿ ಮೀನು ಹಿಡಿಯಲು ಹೋಗಿ ಮೊಸಳೆ ಪಾಲಾಗಿದ್ದ ದಾಂಡೇಲಿಯ ಮೆಹಬೂಬ್ ಬಾಲಕನ ಶವವು ಎರಡು ದಿನದ ನಂತರ ಇಂದು ಪತ್ತೆಯಾಗಿದೆ. ಪೊಲೀಸರು ,ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಾಯದಿಂದ ಆತನ ಶವವನ್ನು ಪತ್ತೆಹಚ್ಚಿ ತರಲಾಗಿದೆ.ಮೊಸಳೆ ದಾಳಿಯಿಂದ ಆತನ ಒಂದು ಕೈ ಸಂಪೂರ್ಣ ತುಂಡಾಗಿದೆ.
ಭಾನುವಾರ ದಂದು ದಾಂಡೇಲಿಯ ಕಾಳಿ ನದಿ ದಡದಲ್ಲಿ ಮೀನು ಹಿಡಿಯುವಾಗ ಮೊಸಳೆ ಪಾಲಾಗಿದ್ದ ಬಾಲಕನನ್ನು ಹುಡುಕಲು ಅವಿರತ ಶ್ರಮವನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಕೈಗೊಂಡಿದ್ದರು.
ಘಟನೆಯೇನು?
ನದಿ ದಂಡೆಯ ಮೇಲೆ ಮೀನು ಹಿಡಿಯಲು ಗಾಳಹಾಕಿ ಕುಳಿತಿದ್ದ ಬಾಲಕನನ್ನು ಮೊಸಳೆ ಹೊತ್ತೊಯ್ದಿತ್ತು, ದಾಂಡೇಲಿಯ ಕಾಳಿ ನದಿ ದಡದಲ್ಲಿ ಈ ಘಟನೆ ನಡೆದಿತ್ತು. ಮೋಹಿನ್ ಮೆಹಬೂಬ್ ಮೊಸಳೆ ಪಾಲಾದ ಬಾಲಕ. ಮೀನು ಹಿಡಿಯಲು ದಾಂಡೇಲಿ-ಹಳಿಯಾಳ ರಸ್ತೆಯ ಕಾಳಿ ನದಿ ದಡದಲ್ಲಿ ಕುಳಿತಿದ್ದ ಈತ ನದಿ ದಂಡೆಯಲ್ಲಿ ನಿತ್ಯವೂ ಸಹೋದರನ ಜೊತೆ ಮೀನು ಹಿಡಿಯಲು ಬರುತ್ತಿದ್ದ ಎನ್ನಲಾಗಿದೆ. ಈ ಘಟನೆ ನಡೆದ ವೇಳೆ ಸಹೋದರ ದೂರ ಇದ್ದ. ಬಾಲಕ ನಿಂತು ಗಾಳ ಹಾಕುತ್ತಿದ್ದ ಸಮಯದಲ್ಲಿ ಮೊಸಳೆ ಏಕಾಏಕಿ ದಾಳಿ ನಡೆಸಿ, ಬಾಲಕನನನ್ನು ಹೊತ್ತೊಯ್ದಿತ್ತು.