ಹೊನ್ನಾವರ: ಹೊನ್ನಾವರದಲ್ಲಿ ಸಾಮ್ರಾಜ್ಯ ಸ್ಥಾಪಿಸಿ, ಗೇರುಸೊಪ್ಪೆಯ ರಾಣಿ ಹಾಗೂ ಕಾಳು ಮೆಣಸಿನ ರಾಣಿ ಎಂದು ಖ್ಯಾತಿ ಪಡೆದಿರುವ ರಾಣಿ ಚೆನ್ನಾಭೈರಾದೇವಿ ಥೀಮ್ ಪಾರ್ಕ್ ಹೊನ್ನಾವರದಲ್ಲಿ ನಿರ್ಮಾಣ ಮಾಡುವ ದೃಷ್ಟಿಯಿಂದ ಇಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಸ್ಥಳ ವೀಕ್ಷಣೆ ಮಾಡಿದರು.
ಹೊನ್ನಾವರ ತಾಲೂಕಿನಲ್ಲಿ ಕಾಸರಕೊಡ ಇಕೋ ಬೀಚ್‌ಗೆ ಆಗಮಿಸಿ ಸ್ಥಳ ವೀಕ್ಷಣೆ ನಡೆಸಿದರು. ಕಾಸರಕೋಡ ಫಾರೆಸ್ಟ್ ಬಂಗಲೆಯಲ್ಲಿ ಅಧಿಕಾರಿಗಳು ಮತ್ತು ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದು, ಚೆನ್ನಾಭೈರಾದೇವಿ ಗತ ವೈಭವ ಚಿತ್ರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈಗಾಗಲೆ ಈ ಸಂಬಂಧ ಸಮಿತಿ ರಚಿಸಲಾಗಿದೆ. ಹಾಗೂ ಮುಂದಿನ ಯೋಜನೆ ಬಗ್ಗೆ ಚರ್ಚಿಸಲಾಗಿದೆ.
ಸೆಮಿನಾರ್ ಮೊದಲು ನಡೆಸಿ ನಂತರ ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಡಿ.ಎಫ್ ಓ ಗಣಪತಿ ನಾಯ್ಕ, ಉದ್ಯಮಿ ಮುರಳಿದರ ಪ್ರಭು, ಹಿರಿಯ ಪತ್ರಕರ್ತ ಜಿ.ಯು ಭಟ್ಟ, ಚಂದ್ರಶೇಖರ ಗೌಡ ಮುಂತಾದ ಗಣ್ಯರು ಇದ್ದರು. ಇದೇ ಸಂದರ್ಭದಲ್ಲಿ ಕಾಸರಕೋಡನಲ್ಲಿ ಕಾಂಡ್ಲಾವನ ನಡುಗೆಯ ಬಗ್ಗೆ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾಸರಕೋಡಿನಲ್ಲಿ ನಿರ್ಮಿಸಲು ಉದ್ದೇಶಿಸಿದ ಖಾಸಗಿ ಬಂದರಿನ ಕುರಿತಾಗಿ ಆಗುವ ಸಮಸ್ಯೆಗಳನ್ನು ತಿಳಿಸಿ ಸಾರ್ವಜನಿಕರು ಮನವಿ ಸಲ್ಲಿಸಿದರು ಎನ್ನಲಾಗಿದೆ.