ಭಟ್ಕಳ : ಉತ್ತರಕನ್ನಡದಲ್ಲಿ ಮತ್ತೆ ವಿವಿದೆಡೆ ಕಳ್ಳತನ ಪ್ರಕರಣಗಳು ಸದ್ದು ಮಾಡುತ್ತಿದೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮನೆಯ ಬಾಗಿಲನ್ನು ಮುರಿದು ಒಳ ಹೊಕ್ಕಿರುವ ಕಳ್ಳರು ಲಕ್ಷಾಂತರ ರುಪಾಯಿ ನಗದು ಹಾಗೂ ಚಿನ್ನಾಭರಣ ಗಳೊಂದಿಗೆ ಪರಾರಿಯಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಮನೆಯಲ್ಲಿನ 2 ಕಪಾಟುಗಳನ್ನು ಒಡೆದು ತೆರೆಯಲಾಗಿದ್ದು, ರು.1.5 ಲಕ್ಷ ನಗದು, ಒಂದು ಚಿನ್ನದ ಸರ, ಒಂದು ಚಿನ್ನದ ಕಿವಿಯೋಲೆ, ಒಂದು ರಿಂಗ್ ಅನ್ನು ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ.
ಕಳ್ಳತನಕ್ಕೆ ಒಳಗಾದ ‘ಗುಲ್ ಈ ನಾಜ್’ ಹೆಸರಿನ ಈ ಮನೆಯು ಎಮ್.ಜೆ.ಇಲಿಯಾಸ್ ಎಂಬುವವರಿಗೆ ಸೇರಿದ್ದಾಗಿದೆ. ಮದುವೆ ಕಾರ್ಯಕ್ರಮದ ನಿಮಿತ್ತ ಮನೆಯವರೆಲ್ಲರೂ ಮನೆ ಬಿಟ್ಟು ತೆರಳಿದ್ದರು. ಆ ಸಂದರ್ಭದಲ್ಲಿ ಕಳ್ಳರು ಹಣ, ಚಿನ್ನಾಭರಣಗಳಿಗಾಗಿ ಹುಡುಕಾಟ ನಡೆಸಿ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿರುವುದು ಕಂಡು ಬಂದಿದೆ. ಈ ವೇಳೆ ರಾಡ್‌ನ್ನು ಬಳಸಿ ಮನೆಯ ಬಾಗಿಲನ್ನು ಒಡೆದು ತೆರೆಯಲಾಗಿರುವುದು ಕಂಡು ಬಂದಿದೆ.
ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳದಲ್ಲಿ ಮತ್ತೆ ಮನೆ ಕಳ್ಳತನ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ.