ಅಂಕೋಲಾ : ಪ್ರೀತಿ ನಿರಾಕರಿಸಿದ ಯುವತಿಯನ್ನು ಹತ್ಯೆಗೈದು ತದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಲಿಂಗಧೀರ ಮಲ್ಲಸಂದ್ರದಲ್ಲಿ ನಡೆದಿದೆ.
ಅಂಕೋಲಾ ಮೂಲದ ಉಷಾ ಎಂಬುವ ಯುವತಿಗೆ ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ವಿಷ ಸೇವಿಸಿ ತಮಿಳುನಾಡಿನ ಗೋಪಾಲಕೃಷ್ಣ (30) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಷಾ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಬೇರೊಂದು ಖಾಸಗಿ ಕಂಪನಿಯಲ್ಲಿ ಗೋಪಾಲಕೃಷ್ಣ ಕೂಡ ಕೆಲಸ ಮಾಡುತ್ತಿದ್ದ.
ಉಷಾ ಹಾಗೂ ಗೋಪಾಲಕೃಷ್ಣ ಹಲವು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಕೆಲವು ದಿನಗಳ ಹಿಂದೆ ಉಷಾಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಗೋಪಾಲಕೃಷ್ಣ ಮನನೊಂದಿದ್ದನು. ಯುವತಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಮನೆಗೆ ಬಂದಿದ್ದ ಗೋಪಾಲಕೃಷ್ಣ, ತಲೆದಿಂಬಿನಿಂದ ಉಸಿರುಗಟ್ಟಿಸಿ ಉಷಾಳನ್ನ ಹತ್ಯೆ ಮಾಡಿದ್ದಾನೆ.
ಬಳಿಕ ಗೋಪಾಲಕೃಷ್ಣ ತರಬಹಳ್ಳಿ ಗ್ರಾಮದ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.