ಯಲ್ಲಾಪುರ: ತಾಲೂಕಿನ ಮಾವಿನಮನೆ ಗ್ರಾ.ಪಂ ವ್ಯಾಪ್ತಿಯ ಬಾಸಲದಲ್ಲಿರುವ ರಿಲಯನ್ಸ್ ಮೊಬೈಲ್ ಟವರ್ ಕಳೆದ ಕೆಲ ತಿಂಗಳುಗಳಿಂದ ಸ್ಥಗಿತಗೊಂಡಿದ್ದು, ಸುತ್ತಮುತ್ತಲಿನ ಸಾವಿರಾರು ಗ್ರಾಹಕರಿಗೆ ಮೊಬೈಲ್ ಇದ್ದೂ, ಕರೆ ಮಾಡಲಾಗದ ಸ್ಥಿತಿ ಉಂಟಾಗಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಕಂಪನಿಯ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.
ಬಾಸಲ್‍ನಲ್ಲಿ ಹತ್ತು ವರ್ಷಗಳ ಹಿಂದೆ ರಿಲಾಯನ್ಸ ಟವರ್ ನಿರ್ಮಿಸಲಾಗಿತ್ತು. ಆಗ ಬಾಸಲ, ಕಾನೂರು, ನೆಲೆಪಾಲ್ ,ವಾಗಳ್ಳಿ ಹಾಗೂ ಮಲವಳ್ಳಿ ಭಾಗದಲ್ಲಿ ಬಿಎಸ್‍ಎನ್‍ಎಲ್ ಸ್ಥಿರ ದೂರವಾಣಿಯ ಸಮಸ್ಯೆಗಳೇ ಹೆಚ್ಚಾಗಿದ್ದುದರಿಂದ ಸರಿಯಾದ ಸಂಪರ್ಕ ವ್ಯವಸ್ಥೆಯ ಸಲುವಾಗಿರುವುದರಿಂದ ಗ್ರಾಮಸ್ಥರು ರಿಲಯನ್ಸ್‍ನ ಮೊರೆ ಹೋಗಿದ್ದರು. ಬಿಎಸ್‍ಎನ್‍ಎಲ್ ಸ್ಥಿರ ದೂರವಾಣಿಯನ್ನು ರದ್ದುಗೊಳಿಸಿ ರಿಲಯನ್ಸ್ ಬಳಸತೊಗಿದ್ದರು. ಮೊದ ಮೊದಲು ಉತ್ತಮ ಸೇವೆ ದೊರೆತರೂ ಕಳೆದ ವರ್ಷದಿಂದ ರಿಲಯನ್ಸ್ ಸೇವೆಯಲ್ಲಿ ವ್ಯತ್ಯಯವಾಗುತ್ತ ಬಂದಿತ್ತು.
4 ಜಿ ಆಸೆ ತೋರಿಸಿ ಇದ್ದ ನೆಟ್ವರ್ಕ ತೆಗೆದ ರಿಲಯನ್ಸ್: ಬಾಸಲ್‍ನ ಸುತ್ತಮುತ್ತಲಿನ ಗ್ರಾಮಗಳಿಗೆ ರಿಲಾಯನ್ಸ ಸಿಡಿಎಂಎ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕಳೆದ ವರ್ಷ ಸಿಡಿಎಂಎ ನೆಟ್ವರ್ಕ ಬಂದ್ ಆಗಲಿದ್ದು, ಅದನ್ನು ರಿಲಯನ್ಸ 4ಜಿ ಯಾಗಿ ಪರಿವರ್ತಿಸಿಕೊಳ್ಳಿ ಎಂದು ಕಂಪನಿಯವರ ವಿನಂತಿಯ ಮೇರೆಗೆ ಗ್ರಾಹಕರು ಪರಿವರ್ತಿಸಿಕೊಂಡಿದ್ದರು. ಆದರೆ ಈವರೆಗೆ ನೆಟ್ವರ್ಕ ಮಾತ್ರ ಬಿಟ್ಟಿಲ್ಲ ಎಂಬುದು ಗ್ರಾಮಸ್ಥರ ಬೇಸರ. ಕೇವಲ ಜಿಎಸ್‍ಎಂ ಗ್ರಾಹಕರಿಗೆ, ವಿದ್ಯುತ್ ಸಂಪರ್ಕ ಇರುವಷ್ಟು ಸಮಯ ಮಾತ್ರ ನೆಟ್‍ವರ್ಕ್ ಸಿಗುವಂತಾಗಿತ್ತು. ಕಳೆದ ತಿಂಗಳು 21,840 ರೂ. ವಿದ್ಯುತ್ ಬಿಲ್ ತುಂಬದ ಕಾರಣ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸಿದ್ದು, ಟವರ್ ಸಂಪೂರ್ಣ ಸ್ಥಗಿತಗೊಂಡಿದೆ. ರಿಲಯನ್ಸನ್ನು ನಂಬಿ ಇದ್ದ ಎಲ್ಲ ದೂರವಾಣಿಗಳನ್ನು ರದ್ದುಗೊಳಿಸಿದ ಜನತೆಗೆ ಕಂಪನಿಯ ಮೋಸದಿಂದಾಗಿ ದೂರವಾಣಿ ಸಂಪರ್ಕವೇ ಇಲ್ಲದಂತಾಗಿದೆ. ರಿಲಯನ್ಸ್ ಕಂಪನಿ ವಿದ್ಯುತ್ ಬಿಲ್ ತುಂಬಲೂ ಸಾಧ್ಯವಾಗದಷ್ಟು ದಿವಾಳಿ ಆಗಿದೆಯೇ ಎಂಬ ಪ್ರಶ್ನೆ ಜನತೆಯಲ್ಲಿ ಮೂಡುವಂತಾಗಿದೆ.
ಉತ್ತಮ ಸೇವೆಯ ಹೆಸರಿನಲ್ಲಿ ಗ್ರಾಹಕರಿಗೆ ಕಂಪನಿ ಮೋಸ ಮಾಡಿದೆ. ಈಗ ನೆಟ್ವರ್ಕ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದೇವೆ. ಕಂಪನಿಯ ವಿರುದ್ದ ಗ್ರಾಹಕ ರಕ್ಷಣಾ ವೇದಿಕೆಯಲ್ಲಿ ದೂರು ದಾಖಲಿಸುತ್ತೇವೆ ಎಂದು ಗಣಪತಿ ಕಟ್ಟೆಮನೆ ಹೇಳಿದ್ದಾರೆ.