ಭಟ್ಕಳ: ಭಟ್ಕಳ ನ್ಯಾಯಾಲಯ ಬಿ.ಇ.ಓ ಕಛೇರಿಯನ್ನು ಜಪ್ತಿ ಮಾಡಲು ಆದೇಶ ಹೊರಡಿಸಿದ್ದು, ಈ ಹಿನ್ನೆಲೆ ನ್ಯಾಯಾಲಯದ ಸಿಬ್ಬಂದಿಗಳು ಜಪ್ತಿಪಡಿಸಲಾದ ಉಪಕರಣಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಏಕೆ ಹೀಗಾಯ್ತು?
ಸರಕಾರಿ ಉರ್ದು ಪ್ರಾಥಮಿಕ ಶಾಲೆಯನ್ನು 1972 ರಲ್ಲಿ ಜಮಾತುಲ್ ಮುಸ್ಲಿಮಿನ್ ಮುಗ್ದುಮ್ ಕಾಲೋನಿ ಅವರು ನಿರ್ಮಾಣ ಮಾಡಿ ರೂ. 111 ಕ್ಕೆ ತಿಂಗಳ ಬಾಡಿಗೆ ನಿಗದಿ ಮಾಡಲಾಗಿದ್ದು, ಬಳಿಕ 1983-84ರಲ್ಲಿ ಕಟ್ಟಡವನ್ನು ಮತ್ತೆ ವಿಸ್ತರಣೆ ಮಾಡಿ ರೂ. 100 ಬಾಡಿಗೆ ನಿಗದಿಸಿ ರೂ. 332 ಬಾಡಿಗೆ ನೀಡಿ ಒಪ್ಪಂದ ಮಾಡಿ ಮುಂದುವರೆಸಿದರು. ಇದೇ ವೇಳೆ ಸ್ವಲ್ಪ ವರ್ಷದ ವರೆಗೆ ಬಾಡಿಗೆ ನೀಡುತ್ತಾ ಬಂದಿದ್ದು ನಂತರದಲ್ಲಿ ಬಾಡಿಗೆ ನೀಡದ ಹಿನ್ನೆಲೆ 2005ರಲ್ಲಿ ವರ್ಷಕ್ಕೆ ರೂ.8916 ಬಾಡಿಗೆ ಹಣ ನೀಡಬೇಕೆಂದು ನ್ಯಾಯಾಲಯದಲ್ಲಿ ದಾವೆ ಹಾಕಲಾಯಿತು.
ಸಹಾಯಕ ಶಿಕ್ಷಣಾಧಿಕಾರಿ ಭಟ್ಕಳ, ಕ್ಷೇತ್ರ ಶಿಕ್ಷಣಾಧಿಕಾರಿ ಭಟ್ಕಳ, ಸಾರ್ವಜನಿಕ ಸೂಚನೆಗಳ ಉಪ ನಿರ್ದೇಶಕರು ಕಾರವಾರ ಹಾಗೂ ಜಿಲ್ಲಾಧಿಕಾರಿ ಉತ್ತರ ಕನ್ನಡ ಅವರೆಲ್ಲು ಬಾಡಿಗೆ ಹಣಕ್ಕೆ ಹಕ್ಕುದಾರರು ಎಂದು ಆದೇಶಿಸಿದ್ದರು ಸಹ ಹಣ ಪಾವತಿಸದ ಹಿನ್ನೆಲೆ ಮತ್ತೆ ಜಮಾತುಲ್ ಮುಸ್ಲಿಮಿನ್ ಅವರು 2019ರಲ್ಲಿ ಮತ್ತೆ ನ್ಯಾಯಾಲಯದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯಿಂದ ರೂ. 1,49,998 ಬಾಕಿ ಇದೆ ಎಂದು ಎಗ್ಜಿಕಶನ್ ಹಾಕಿದರು. ಅವೆಲ್ಲರ ಮೇಲೆ ನ್ಯಾಯಾಲಯವು ಸೆಪ್ಟೆಂಬರ್ 14 ರಂದು ಲಗತ್ತು ಆದೇಶ ಹೊರಡಿಸಿತು. ಈ ಮಧ್ಯೆ 2012 ರಲ್ಲಿ ಜಮಾತುಲ್ ಮುಸ್ಲಿಮಿನ್ ಗೆ ರೂ. 2498 ವೆಚ್ಚ ನೀಡಬೇಕೆಂದು ನ್ಯಾಯಾಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶಿಸಿತ್ತು. ಜಮಾತೆ ಪರ ನ್ಯಾಯವಾದಿ ಆರ್.ಜಿ.ನಾಯ್ಕ ಸರ್ಪನಕಟ್ಟೆ ವಾದ ಮಂಡಿಸಿದರು.
ನ್ಯಾಯಲಯದ ವಾರಂಟ್ ಹೊರಡಿಸಿ ಜಪ್ತಿ ನಿಯಮ ಜಾರಿಗೆ ಮಾಡಿ ಗುರುವಾರದಂದು ತಾಲೂಕಿನ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯದ ಬೆಲೀಫ್ ರಾದ ಗಣಪತಿ ಅವರು ಬಿ.ಈ.ಓ ಕಛೇರಿಗೆ ಬಂದು ವಸ್ತುಗಳನ್ನು ಜಪ್ತಿ ಮಾಡಿಕೊಂಡರು.
ಕಾಲಾವಕಾಶ ಕೇಳಿದ ಶಿಕ್ಷಣಾಧಿಕಾರಿಗಳು
ಈ ವೇಳೆ ಕಚೇರಿಗೆ ನ್ಯಾಯಾಲಯದಲ್ಲಿ ದಾವೆ ಹಾಕಿದ ಮುಗ್ದುಮ್ ಕಾಲೋನಿಯ ಜಮಾತುಲ್ ಮುಸ್ಲಿಮಿನ್ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರು ಬಂದಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಒಂದು ತಿಂಗಳ ಅವಧಿಯನ್ನು ಕೇಳಿದ್ದು ಜಮಾತುಲ್ ಮುಸ್ಲಿಮಿನ್ ಅವರಲ್ಲಿ ಕೇಳಿದ್ದು ನ್ಯಾಯಾಲಯದ ಆದೇಶಕ್ಕೆ ವಿರುದ್ದವಾಗಿ ನಾವು ನಡೆದುಕೊಳ್ಳಲು ಸಾಧ್ಯವಿಲ್ಲ ಜಪ್ತಿಯ ಆದೇಶದಂತೆ ನಮಗೆ ಸಿಗಬೇಕಾದ ಹಣ ನೀಡಬೇಕು ಇದಕ್ಕೆ ನ್ಯಾಯಾಲಯದ ಆದೇಶದಂತೆ ಮುಂದುವರೆಯಲಿ ಎಂದು ಜಮಾತುಲ್ ಮುಸ್ಲಿಮಿನ್ ಅಧ್ಯಕ್ಷ ಸಾದಿಕ್ ಮಟ್ಟಾ ತಿಳಿಸಿದರು.
ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದು ಸರಕಾರಿ ಕಚೇರಿಯ ಜೊತೆಗೆ ಸಾರ್ವಜನಿಕರ ಆಸ್ತಿ ಆಗಿದ್ದು ಇದರಲ್ಲಿ ನ್ಯಾಯಾಲಯದಿಂದ ಲಗತ್ತು ಆದೇಶ ತರಬೇಕಾಗಿತ್ತಾ ಎಂದು ಪ್ರಶ್ನಿಸಿದಕ್ಕೆ ಅಧ್ಯಕ್ಷ ಮಟ್ಟಾ ಸಾಧಿಕ್ ಸತತ 8 ದಿನದಿಂದ ಕಚೇರಿಗೆ ಬರುತ್ತಿದ್ದು ಹಣ ನೀಡುವ ಬಗ್ಗೆ ದಿನವನ್ನು ಮುಂದುಡುತ್ತಿದ್ದಾರೆ ಹೊರತು ಹಣ ಪಾವತಿಯಾಗಿಲ್ಲವಾಗಿದೆ ಇದಕ್ಕೆ ಯಾರು ಹೊಣೆ. ಇದರಲ್ಲಿ ಜಮಾತುಲ್ ಮುಸ್ಲಿಮಿನ್ ಎಲ್ಲಾ ಪದಾಧಿಕಾರಿಗಳಿಂದ ನೀವು ಕೇಳಿದ ಕಾಲಾವಕಾಶ ಅವಧಿಯ ಬಗ್ಗೆ ಚರ್ಚಿಸಿ ತಿಳಿಸಬೇಕಾಗುತ್ತದೆ ತಕ್ಷಣಕ್ಕೆ ನ್ಯಾಯಾಲಯದ ಆದೇಶ ಪಾಲನೆ ಆಗಬೇಕು ಎಂದು ಅಧ್ಯಕ್ಷ ಮಟ್ಟಾ ಸಾದಿಕ್ ಹೇಳಿದರು.
ಅಂತ್ಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೋಗೆರ ಅವರು ಇದರಲ್ಲಿ ನಮ್ಮ ಮೇಲಾಧಿಕಾರಿಗಳ ಸೂಚನೆಯಂತೆ ನಾನು ನಡೆದುಕೊಳ್ಳಬೇಕಿದೆ. ಅವರು ಒಂದು ತಿಂಗಳ ಅವಧಿಯಲ್ಲಿ ಹಣ ಪಾವತಿ ಮಾಡುವುದಾಗಿ ಹೇಳಿದ್ದು ಇದಕ್ಕೆ ಜಮಾತುಲ್ ಮುಸ್ಲಿಮಿನ್ ಮುಗ್ದುಮ್ ಕಾಲೋನಿ ಅವರು ಅವಕಾಶ ನೀಡಬೇಕೆಂದು ಅಸಹಾಯಕತೆ ವ್ಯಕ್ತಪಡಿಸಿದರು.
ಜಪ್ತಿ ಮಾಡಲಾದ ಬಿ.ಇ.ಓ ಕಛೇರಿ ಉಪಕರಣಗಳು.
ಕಂಪ್ಯೂಟರ್- 9, ಫೈಬರ್ ಚೇರ್ -66, ಕುರ್ಚಿ -26, ಟೇಬಲ್ -26, ವಾಹನ – 1 ಹಾಗೂ ಮೆಟಲ್ ಟೇಬಲ್ -2 ನ್ನು ಜಪ್ತಿ ಮಾಡಲಾಯಿತು.
ಕಚೇರಿಯ ಕೆಲಸದ ನಡುವೆಯೇ ಕಂಪ್ಯೂಟರ್ ಸಹಿತ ಉಪಕರಣ, ಕುರ್ಚಿ ಟೇಬಲ್ ಗಳನ್ನು ಅಧಿಕಾರಿಗಳು, ಸಿಬ್ಬಂದಿಗಳ ಮುಂದೆಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬರುವಿಕೆಯ ವರೆಗು ಕಾದು ನಂತರ ಜಪ್ತಿ ಪ್ರಕ್ರಿಯೆಯನ್ನು ನಡೆಸಲಾಯಿತು.