ಬೆಂಗಳೂರು : ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಲಘು ಹೃದಯಾಘಾತವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಘು ಹೃದಯಾಘಾತದಿಂದ ಅಸ್ವಸ್ಥರಾದ ನಟ ಪುನೀತ್ ರಾಜ್ ಕುಮಾರ್ ಅವರನ್ನ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಇಸಿಜಿ ಮಾಡುತ್ತಿದ್ದು ಮೇಲ್ನೋಟಕ್ಕೆ ಯಾವುದೇ ಗಂಭೀರ ಸಮಸ್ಯೆ ಕಂಡು ಬಂದಿಲ್ಲ ಎನ್ನಲಾಗುತ್ತಿದೆ.
ಘಟನೆ ಸುದ್ದಿ ತಿಳಿದು ಅಭಿಮಾನಿಗಳು ಆತಂಕಗೊಂಡಿದ್ದರು.ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಆರೋಗ್ಯದಲ್ಲಿ ಏರು ಪೇರಾಗಿತ್ತು ಎಂದು ತಿಳಿದುಬಂದಿದೆ. ಜಿಮ್ ಮಾಡುವಾಗ ನಟ ಪುನೀತ್ ಅಲ್ಲಿಯೇ ಕುಸಿದು ಬಿದ್ದಿದ್ದರು.
ತಕ್ಷಣ ಅವರ ಆಪ್ತ ಸಹಾಯಕರು ನಟನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ವಿಕ್ರಂ ಆಸ್ಪತ್ರೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೋಮೆಂದು ಮುಖರ್ಜಿ, ಡಿಸಿಪಿ ಅನುಚೇತ್ ದೌಡಾಯಿಸಿದ್ದಾರೆ.
ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್ ಅವರು ಭಜರಂಗಿ 2 ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಣ್ಣ ಶಿವರಾಜ್ ಕುಮಾರ್ ಸೇರಿದಂತೆ ಸಿನಿ ಗಣ್ಯರ ಜೊತೆ ಖುಷಿಯಾಗಿ ಸಮಯ ಕಳೆದಿದ್ದ ನಟನ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದವು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದ ನಟ, ಎರಡನೇ ಲಾಕ್ ಡೌನ್ ಬಳಿಕೆ ಎಲ್ಲಾ ಸಿನಿಮಾಗಳು ಒಳ್ಳೆ ಒಪನಿಂಗ್ ಪಡೆದಿವೆ. ಭಜರಂಗಿ2 ನಾಡಿದ್ದು 29ಕ್ಕೆ ಬಿಡುಗಡೆ ಆಗುತ್ತಿದೆ. ನಾನು ಸಿನಿಮಾದ ಕ್ಲಿಪ್ಪಿಂಗ್ ಗಳನ್ನ ಮೊದಲಿನಿಂದಲೂ ನೋಡುತ್ತಾ ಬಂದಿದ್ದೇನೆ. ಸಿನಿಮಾದ ಕಥೆ, ಕ್ವಾಲಿಟಿ ಅದ್ಭುತವಾಗಿದೆ. ನನಗೆ ಶಿವಣ್ಣನ ಎಲ್ಲಾ ಲುಕ್ ಗಳು ಇಷ್ಟವಾಗುತ್ತೆ. ಮರೆಯಲಾಗದ ಗೆಟಪ್ ಅಂದ್ರೆ ಮನ ಮೆಚ್ಚಿದ ಹುಡುಗಿ, ಜನುಮದ ಜೋಡಿ, ಕುರುಬನ ರಾಣಿ ಪಾತ್ರಗಳು ತುಂಬಾ ಇಷ್ಟ ಎಂದು ನೆನಪಿಸಿಕೊಂಡಿದ್ದರು.
ಯಾವುದೇ ಆಗು ಹೋಗಿನ ಸುದ್ದಿಗಳಿಗೆ ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ. ಸೂಕ್ತ ಕಾಲಕ್ಕೆ ಕುಟುಂಬದವರು ಸೂಕ್ತವಾದ ಮಾಹಿತಿ ನೀಡಲಿದ್ದಾರೆಂದು ಕಾಯಲಾಗುತ್ತಿದೆ. ಗಭಿಮಾನಿಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿ ಬಳಗ ಪ್ರಾರ್ಥಿಸುತ್ತಿದೆ.
Source : Oneline News