ಕುಮಟಾ: ತಾಲೂಕಿನ ಕಲಭಾಗದಲ್ಲಿ ಪರವಾನಗಿ ಇಲ್ಲದೇ ನಡೆಸಲಾಗುತ್ತಿದ್ದ ನಾರಾಯಣಿ ಕ್ಲಿನಿಕ್ ಮೇಲೆ ತಹಸೀಲ್ದಾರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ಬೀಗ ಜಡಿದಿದ್ದಾರೆ.
ಕಲಭಾಗ ಗ್ರಾ.ಪಂ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಾರಾಯಣಿ ಕ್ಲಿನಿಕ್ ನಡೆಸಲಾಗುತ್ತಿದ್ದು, ಆರೋಗ್ಯ ಇಲಾಖೆಯ ಅಡಿಯಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಅಲ್ಲದೇ ಅಲ್ಲಿರುವ ವೈದ್ಯರು ವೈದ್ಯಕೀಯ ಪದವಿಯನ್ನೂ ಪಡೆದಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಪರಿಶೀಲನೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆ ಭಾಗದ ಸಾರ್ವಜನಿಕರು ಮನವಿ ಸಲ್ಲಿಸಿದ್ದರು.
ಕಳೆದ ಒಂದು ವಾರದ ಹಿಂದೆ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿಯೂ ಈ ವಿಷಯ ಪ್ರಸ್ತಾಪವಾಗಿತ್ತು. ಕ್ಲಿನಿಕ್‌ಗೆ ಭೇಟಿ ನೀಡಿ, ದಾಖಲೆಪತ್ರಗಳನ್ನು ಪರಿಶೀಲನೆ ನಡೆಸಲಾಗಿದೆ. ಕರ್ನಾಟಕ ಮೆಡಿಕಲ್ ರಿಜಿಸ್ಟಾರ್‌ನಲ್ಲಿ ನೋಂದಣಿಯಾಗಿಲ್ಲ. ಇದರ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಆಯುಷ್ ವೈದ್ಯಾಧಿಕಾರಿ ಡಾ.ಭಾರತಿ ಪಟಗಾರ ಉತ್ತರಿಸಿದ್ದರು.
ಈ ಹಿನ್ನೆಲೆಯಲ್ಲಿ ಬಧವಾರ ತಹಸೀಲ್ದಾರ ವಿವೇಕ ಶೇಣ್ವಿ ನೇತೃತ್ವದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಆಯುಷ್ ವೈದ್ಯಾಧಿಕಾರಿ ಡಾ.ಭಾರತಿ ಪಟಗಾರ, ಪಿ.ಎಸ್.ಐ ರವಿ ಗುಡ್ಡಿ ನೇತೃತ್ವದಲ್ಲಿ ಆಸ್ಪತ್ರೆಯ ಮೇಲೆ ದಾಳಿ ನಡೆಸಿ, ಇನ್ನುಮುಂದೆ ಆಸ್ಪತ್ರೆಯ ಬಾಗಿಲು ತೆರೆಯದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಪರವಾನಗಿ ಪಡೆದುಕೊಳ್ಳುವತನಕ ಈ ಕ್ಲಿನಿಕ್ ನಡೆಸಲು ಸಾಧ್ಯವಿಲ್ಲ. ನಮ್ಮ ಇಲಾಖಾ ತಂಡ ದಾಳಿ ನಡೆಸಿ ಆಸ್ಪತ್ರೆಗೆ ಬೀಗ ಹಾಕಿದ್ದೇವೆ. ನಿಯಮಾನುಸಾರ ಎಲ್ಲಾ ಪ್ರಕ್ರಿಯೆ ಮುಗಿಸಿ ಪರವಾನಗಿ ಪಡೆದುಕೊಂಡ ನಂತರವೇ ಆಸ್ಪತ್ರೆ ಪುನಃ ಪ್ರಾರಂಭಿಸಲು ಅವಕಾಶ ನೀಡಲಾಗುವುದು.
- ಡಾ.ಆಜ್ಞಾ ನಾಯಕ, ತಾಲ್ಲೂಕು ವೈದ್ಯಾಧಿಕಾರಿ