ಶಿರಸಿ: ಶಿರಸಿ-ಹಾವೇರಿ ರಸ್ತೆಯನ್ನು ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ (NH766E) ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಗೊಳಿಸಲು ಯೋಜನೆ ಸಿದ್ದವಾಗಿದೆ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದಾಜು 208 ಕೋಟಿ ರೂಪಾಯಿ ವೆಚ್ಚದಲ್ಲಿ 75 ಕಿ.ಮೀ. ಈಗಿರುವ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದ್ದು, 10 ಮೀಟರ್ ಅಗಲದ ದ್ವಿಪಥ ರಸ್ತೆ ನಿರ್ಮಾಣ ಆಗಲಿದ್ದು, ವಿಸ್ತೃತವಾದ ವರದಿಯನ್ನು ಯೋಂಗಮಾ ಇಂಜಿನಿಯರಿಂಗ್ ಕಾರ್ಪೊರೇಶನ್ ಲಿಮಿಟೆಡ್ ತಯಾರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇವರಿಗೆ ಸಲ್ಲಿಸಿದ್ದರು. ಈ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ನವೆಂಬರ 2 ನೇ ವಾರದಲ್ಲಿ ಟೆಂಡರ್ ಪ್ರಕ್ರಿಯೆ ಸಂಪೂರ್ಣವಾಗಿ ಅಂತಿಮಗೊಂಡು, ಜನೇವರಿ 2022 ರ ಹೊತ್ತಿಗೆ ಕಾಮಗಾರಿ ಪ್ರಾರಂಭವಾಗುವ ನಿರೀಕ್ಷಿಯಿದ್ದು, ದಾಸನಕೊಪ್ಪದಲ್ಲಿ ಟೋಲ್ ಗೇಟ್ ನಿರ್ಮಾಣ ಮಾಡಲು ಮಾತ್ರ ಭೂಸ್ವಾಧೀನ ಮಾಡಲಾಗುತ್ತಿದೆ.
ನ.8 ರಂದು ಸಂಸದರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆಯಲಿದೆ. ಈ ಹಿಂದೆ ಸಂಸದ ಅನಂತಕುಮಾರ ಹೆಗಡೆ ಶಿರಸಿ-ಹಾವೇರಿ ರಸ್ತೆಯನ್ನು ಚತುಷ್ಪತದ ಜೊತೆಗೆ ಬೈಪಾಸ್ ರಸ್ತೆಯನ್ನು ನಿರ್ಮಿಸಲು ಚಿಂತನೆ ನಡೆಸಿ, ಅಧಿಕಾರಿಗಳಿಂದ ಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದರು. ಆದರೆ ಉನ್ನತ ಮಟ್ಟದ ಸಭೆಯಲ್ಲಿ ಚತುಷ್ಪದ ರಸ್ತೆ ನಿರ್ಮಿಸುವಷ್ಟು ಸಾಂದ್ರತೆ ಇಲ್ಲ, ಯೋಜನೆ ವೆಚ್ಚದಾಯಕ ಹಾಗೂ ಅರಣ್ಯನಾಶ ಮುಂತಾದ ಕಾರಣ ನೀಡಿ ಆ ಯೋಜನೆಗೆ ತಾತ್ಕಾಲಿಕ ತಡೆ ಹಿಡಿಯಲಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.