ಐ ಐ ಟಿ ಪಾಟ್ನಾದ ಅಧ್ಯಾಪಕ ಶಿರಸಿ ಬಳಿಯ ಕೊಟ್ಟೆಗದ್ದೆಯ ಅಮರನಾಥ ಹೆಗಡೆ ವಿಶ್ವದ ಅಗ್ರ 2% ವಿಜ್ಞಾನಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಐ ಐ ಟಿ ಪಾಟ್ನಾದ ಇತರ 12 ಅಧ್ಯಾಪಕರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ವಿಶ್ವದ ಅಗ್ರ 2% ವಿಜ್ಞಾನಿಗಳಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರತಿ ವರ್ಷ ಯು ಎಸ್ ನ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯವು ಸಂಶೋಧನಾ ಪ್ರಕಟಣೆಗಳ ಆಧಾರದ ಮೇಲೆ ಪ್ರಪಂಚದಾದ್ಯಂತದ ಅಗ್ರ ಎರಡು ಶೇಕಡಾ ಸಂಶೋಧಕರಿಗೆ ದತ್ತಾಂಶ ಬಿಡುಗಡೆ ಮಾಡುತ್ತದೆ. ಇದನ್ನು ಖ್ಯಾತ ಎಲ್ಸೆವಿಯರ್ ಪ್ರಕಾಶಕರು ಪ್ರಕಟಿಸಿದ್ದಾರೆ. ಈ ವಿಧಾನದ ಪ್ರಕಾರ ಎಲ್ಲಾ ಸಂಶೋಧಕರನ್ನು 22 ವೈಜ್ಞಾನಿಕ ಪ್ರದೇಶಗಳು ಮತ್ತು 176 ಉಪ-ಕ್ಷೇತ್ರಗಳಾಗಿ ವರ್ಗೀಕರಿಸಲಾಗುತ್ತದೆ.
ಕನಿಷ್ಠ 5 ಪತ್ರಿಕೆಗಳನ್ನು ಪ್ರಕಟಿಸಿದ ಎಲ್ಲಾ ವಿಜ್ಞಾನಿಗಳಿಗೆ ಕ್ಷೇತ್ರ ಮತ್ತು ಉಪಕ್ಷೇತ್ರ-ನಿರ್ದಿಷ್ಟ ಶೇಕಡಾವಾರುಗಳನ್ನು ಸಹ ಈ ಸಂಧರ್ಭದಲ್ಲಿ ಒದಗಿಸಲಾಗುತ್ತದೆ .
ಭಾರತದ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಐ ಐ ಟಿ ಪಾಟ್ನಾ ಕೂಡ ಒಂದು. ಈ ಪಟ್ಟಿಯಲ್ಲಿ ತನ್ನ ಅಮೂಲ್ಯ ಸ್ಥಾನವನ್ನು ಹೊಂದಿದೆ ಐ ಐ ಟಿ ಪಾಟ್ನಾ. ಡಾ.ಅಮರನಾಥ ಹೆಗಡೆ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಪ್ರತಿಷ್ಠಿತ ಟಿಎಂಎಸ್ ಉಪಾಧ್ಯಕ್ಷ ಎಂ. ಪಿ. ಹೆಗಡೆ ಅವರ ಪುತ್ರ. ಇವರು ಐಐಟಿ ಪಾಟ್ನಾದಲ್ಲಿ ಸಿವಿಲ್ ಅಂಡ್ ಎನ್ವಿರೋನ್ಮೆಂಟಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.