ಕುಮಟಾ: ಸರಕಾರದ ಎಲ್.ಇ.ಡಿ.ಬಲ್ಬ್ ವಿತರಣೆ ಯೋಜನೆಯಲ್ಲಿ ಹಲವು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ. ಈ ಕುರಿತು ತನಿಖೆ ನಡೆಸಿ ಯೋಗ್ಯ ಕ್ರಮ ಕೈಗೊಳ್ಳಲು ಎಂದು ಬುಧವಾರ ಜನಪರ ವೇದಿಕೆಯು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸರಕಾರದಿಂದ ಜಾರಿಗೊಂಡ ಎಲ್.ಇ.ಡಿ.ಬಲ್ಬ್ ವಿತರಣೆ ಉತ್ತಮ ಯೋಜನೆಯಾಗಿದ್ದು, ಸರಕಾರದ ಅನುದಾನ ಪಡೆದು ಆರಂಭಗೊಂಡ ಈ ಯೋಜನೆಯಲ್ಲಿ ಜನರಿಗೆ ಉತ್ತಮ ಗುಣಮಟ್ಟದ ಬಲ್ಬಗಳು ಕಡಿಮೆ ದರದಲ್ಲಿ ಸಿಗುತ್ತದೆ ಎಂಬ ಆಶಾಭಾವನೆ ಇತ್ತು. ಉತ್ತಮಗುಣಮಟ್ಟದ ಬಲ್ಬಗಳಿಗೆ ಮೂರು ವರ್ಷ ಗ್ಯಾರಂಟಿ ಅವಧಿ ಕೂಡಾ ಇತ್ತು ಆದರೆ ಬಲ್ಬಗಳು ಗುಣಮಟ್ಟದ್ದಾಗಿರದೆ ಕಳಪೆ ಗುಣಮಟ್ಟದ್ದಾಗಿದ್ದು ಬಹುತೇಕ ಮನೆಗಳಲ್ಲಿ ಬಲ್ಬಗಳು ಈಗಲೇ ಕೆಟ್ಟುಹೋಗಿದೆ. ಅವುಗಳನ್ನು ವಿದ್ಯುತ್ ಸರಬರಾಜು ನಿಗಮಕ್ಕೆ ನೀಡಿ ಬದಲಾಯಿಸಿ ಕೊಡಿ ಎಂದರೆ ಇಲ್ಲ ಸಲ್ಲದ ಸಬೂಬು ಹೇಳಿ ಜನರನ್ನು ಮೋಸಗೊಳಿಸುತ್ತಿದ್ದಾರೆ. ರಾಜ್ಯಾದ್ಯಂತ ಇಂತಹುದೆ ಪರಿಸ್ಥಿತಿ ನಿರ್ಮಾಣವಾದ ಶಂಕೆ ವ್ಯಕ್ತವಾಗುತ್ತಿದೆ. ಇದು ಸಾವಿರಾರು ಕೋಟಿ ರೂಪಾಯಿಗಳ ಯೋಜನೆಯಾಗಿದ್ದು, ಇದರಲ್ಲಿ ಅವ್ಯಹಾರ ನಡೆದ ಶಂಕೆ ಬಲವಾಗಿದೆ. ಈ ಯೋಜನೆಯಲ್ಲಿ ಕಡಿಮೆ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಬಲ್ಬಗಳನ್ನು ಜನರಿಗೆ ನೀಡುವ ಮೂಲಕ ಜನರಿಗೂ ಲಾಭವಾಗುವ ಹಾಗೂ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗುವುದರ ಮೂಲಕ ರಾಷ್ಟ್ರೀಯ ಉಳಿತಾಯವು ಆಗುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ನೋಡಿದರೆ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದು ಬಲವಾಗಿದ್ದು ಸಾರ್ವಜನಿಕರಿಗೂ ಹಾಗೂ ಸರಕಾರಕ್ಕೂ ಅಪಾರ ನಷ್ಟವಾಗಿದೆ. ಇಂದು ಸಾಮಾನ್ಯ ಕೂಲಿ ಮಾಡುವವರೂ ಸಹಿತ ತಾವು ಖರೀದಿಸುವ ಪ್ರತಿ ವಸ್ತುವಿನ ಮೇಲೆ ತೆರಿಗೆಯನ್ನು ಪಾವತಿಸಿಯೇ ಖರೀದಿಸುತ್ತಾರೆ. ಆದರೆ ಇಂತಹ ಯೋಜನೆಗಳಲ್ಲಿ ಅವ್ಯವಹಾರ ನಡೆದಿರುವುದನ್ನು ಗಮನಿಸಿದರೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಬಡಜನರ ರಾಜ್ಯದ ಮತ್ತು ದೇಶದ ಹಿತವನ್ನು ಬಲಿಕೊಡುತ್ತಿದ್ದಾರೆ. ಆದ್ದರಿಂದ ಉತ್ತರ ಕನ್ನಡ ಜನಪರ ಹೋರಾಟ ವೇದಿಕೆ ಇದನ್ನು ವಿರೋಧಿಸಿ ತಕ್ಷಣ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿ ಬುಧವಾರ ರಾಜ್ಯಪಾಲರಿಗೆ ಅರ್ಜಿ ರವಾನಿಸಿದೆ.

RELATED ARTICLES  ಗುಂಡು ಎಸೆತದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

ಜನಪರ ಹೋರಾಟ ವೇದಿಕೆಯ ಸ್ಥಾಪಕಾಧ್ಯಕ್ಷ ಎಮ್.ಜಿ.ಭಟ್ಟ, ಕಾರ್ಯದರ್ಶಿ ಮಂಜು ಪಟಗಾರ, ಸುರೇಶ ಹರಿಕಂತ್ರ, ಶ್ರೀಧರ ನಾಯ್ಕ, ಗಣೇಶ ಗೌಡ ಅಂತ್ರವಳ್ಳಿ, ಜಿಲ್ಲಾಧ್ಯಕ್ಷ ಹೇಮಂತ ಗಾಂವಕರ, ನವೀನ ಗುನಗಾ, ಆದಿತ್ಯ ಶೇಟ್, ಸಚಿನ್ ಮಡಿವಾಳ, ಪವನ ಹೆಗಡೆ, ವೆಂಕಟೇಶ ಹೆಗಡೆ ಮತ್ತಿತರರು ಇದ್ದರು.
ಚಿತ್ರ: 10 ಕೆಎಮ್ ಟಿ 5: ಎಲ್ ಇ ಡಿ ಬಲ್ಬ್ ವಿತರಣೆಯ ಅವ್ಯವಹಾರದ ತನಿಖೆ ನಡೆಸುವಂತೆ ಜನಪರ ಹೋರಾಟ ವೇದಿಕೆ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

RELATED ARTICLES  ದಾರಿ……